ಸಾಲ ಮಾಡಿ ಕೃಷಿ ಮಾಡಿಕೊಂಡಿದ್ದ ಯಲ್ಲಪ್ಪ ಬಂತೂರು (35) ಸಾಲ ತೀರಿಸಲಾಗದ ತಲೆಬಿಸಿಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಧಾರವಾಡ ಕುಂದಗೋಳದ ಯಲ್ಲಪ್ಪ ಬಂತೂರು ಕುಮಟಾದಲ್ಲಿ ನೇಣು ಹಾಕಿಕೊಂಡಿದ್ದಾರೆ. ಯಲ್ಲಪ್ಪ ಬಂತೂರು ಅವರು ತಮ್ಮ ಊರಿನಲ್ಲಿ ಮೂರುವರೆ ಎಕರೆ ಕೃಷಿ ಭೂಮಿ ಅಭಿವೃದ್ಧಿಗಾಗಿ ಕರ್ನಾಟಕ ವಿಕಾಸ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ಇದರೊಂದಿಗೆ ಇನ್ನಷ್ಟು ಜನರಲ್ಲಿ ಕೈಗಡ ಸಾಲವನ್ನು ಪಡೆದು ಕೃಷಿ ಚಟುವಟಿಕೆ ಮಾಡುತ್ತಿದ್ದರು.
ಆದರೆ, ಫಸಲು ಕೈ ಕೊಟ್ಟ ಹಿನ್ನಲೆ ಅವರು 15 ದಿನದ ಹಿಂದೆ ಬೇರೆ ವೃತ್ತಿ ಮಾಡಲು ಕುಮಟಾಗೆ ಬಂದಿದ್ದರು. ಕುಮಟಾದ ಪೈರಗದ್ದೆ ನಾಗದೇವತಾ ರಸ್ತೆಯಂಚಿನಲ್ಲಿ ಅವರು ಕುಟುಂಬದ ಜೊತೆ ಬಾಡಿಗೆ ಮನೆ ಪಡೆದಿದ್ದರು. ಟೈಲ್ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆಗೆ ಅಣಿಯಾಗುತ್ತಿದ್ದರು. ಆದರೆ, ಕೃಷಿ ಸಾಲ ತೀರಿಸಲು ಇಲ್ಲಿ ದುಡಿದ ಹಣ ಸಾಕಾಗುತ್ತಿರಲಿಲ್ಲ.
ಇದೇ ನೋವಿನಲ್ಲಿ ಯಲ್ಲಪ್ಪ ಬಂತೂರು ಅವರು ಬಾಡಿಗೆ ಮನೆಯ ವರಂಡಾದಲ್ಲಿ ಜನವರಿ 18ರಂದು ನೇಣಿಗೆ ಶರಣಾದರು. ಅವರ ಪತ್ನಿ ರೂಪಾ ಬೆಂತೂರು ಪೊಲೀಸ್ ಪ್ರಕರಣ ದಾಖಲಿಸಿ, ಶವ ಪಡೆದಿದ್ದಾರೆ.



