28 ವರ್ಷಗಳಿಂದ ಬಾಕಿಯಿದ್ದ ಭೂ ವಿವಾದವನ್ನು ಶಿರಸಿಯ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಬಗೆಹರಿಸಿದ್ದಾರೆ.
ಶಿರಸಿ ತಾಲೂಕಿನ ಯಕ್ಕಂಬಿ ಗ್ರಾಮದ ಏಕಾಂಬಿಕ ಮಹಾಸತಿ ದೇವಸ್ಥಾನದ ಜಾಗ ಹಾಗೂ ದೇವಸ್ಥಾನಕ್ಕೆ ಸಂಬ0ಧಿಸಿದ ದಾರಿ ವಿಷಯವಾಗಿ 28 ವರ್ಷಗಳಿಂದ ಸರ್ಕಾರಕ್ಕೆ ಅರ್ಜಿಗಳ ಮೇಲೆ ಅರ್ಜಿ ಸಲ್ಲಿಕೆಯಾಗುತ್ತಿದ್ದವು. ದಾರಿ ವಿಷಯವಾಗಿ ತಕರಾರು-ಗಲಾಟೆ ಸಾಮಾನ್ಯವಾಗಿದ್ದವು. ಶುಕ್ರವಾರ ಕಾವ್ಯರಾಣಿ ಸ್ಥಳ ಪರಿಶೀಲನೆ ನಡೆಸಿ ಆ ವಿವಾದವನ್ನು ಅಂತ್ಯಗೊಳಿಸಿದ್ದಾರೆ.
ಯಕ್ಕAಬಿ ಗ್ರಾಮದ ಸರ್ವೆ ನಂಬರ್ 7ರಲ್ಲಿನ ಕುಟುಂಬಕ್ಕೆ 1.20 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಹಂಗಾಮಿ ಲಾಗುಣಿ ಮೂಲಕ ನೀಡಿತ್ತು. ಆದರೆ ಆ ಕುಟುಂಬದವರು `ಅಲ್ಲಿನ ದೇವಾಲಯ ಸಹ ತಮ್ಮದು’ ಎಂದು ವಾದಿಸಿದ್ದರು. ದೇವಾಲಯಕ್ಕೆ ದಾರಿ ಬಿಟ್ಟಿರಲಿಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೂ ಅವಕಾಶ ಕೊಡುತ್ತಿರಲಿಲ್ಲ. ಹೀಗಾಗಿ ಗ್ರಾಮಸ್ಥರು ಹಾಗೂ ದೇವಸ್ಥಾನ ಮಂಡಳಿಯವರು 1996ರಿಂದ ಹೋರಾಡುತ್ತಿದ್ದರು. ಈಚೆಗೆ ಊರಿನ ಜನ ಪ್ರತಿಭಟಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಈ ಹಿನ್ನಲೆ ಸಹಾಯಕ ಆಯುಕ್ತರಾದ ಕಾವ್ಯರಾಣಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ತಕ್ಷಣ ಸರ್ವೇ ಮಾಡುವಂತೆ ಆದೇಶ ನೀಡಿದ್ದರು. ಶಿರಸಿ ಗ್ರಾಮೀಣ ಸಿಪಿಐ ಸೀತಾರಾಮ್ ನೇತೃತ್ವದಲ್ಲಿ 20ಕ್ಕೂ ಅಧಿಕ ಪೊಲೀಸರ ಬಿಗಿ ಭದ್ರತೆಯಲ್ಲಿ ಸರ್ವೇ ಕಾರ್ಯ ನಡೆಯಿತು. ಖಾಸಗಿ ವ್ಯಕ್ತಿಯ ಗಡಿ ಗುರುತಿಸಿ ಅವರು ಅತಿಕ್ರಮಣ ನಡೆಸದಂತೆ ಜೆಸಿಬಿ ಮೂಲಕ ಅಗಳ ತೋಡಲಾಯಿತು. ಅರಣ್ಯ ಇಲಾಖೆಯ ಬನವಾಸಿ ಆರ್‌ಎಫ್‌ಓ ಭವ್ಯ ನಾಯ್ಕ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಸ್ಥಳದಲ್ಲಿ ಹಾಜರಿದ್ದು ಬೇಲಿ ನಿರ್ಮಾಣಕ್ಕೆ ಸಾಕ್ಷಿಯಾದರು.
ಈ ಹಿನ್ನಲೆ 28 ವರ್ಷಗಳ ಹಳೆಯ ಪ್ರಕರಣ ಇದೀಗ ಬಗೆಹರಿದಿದೆ. ಜನವರಿ 28 ಹಾಗೂ 29ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.