ರಾಜ್ಯದ ಪ್ರಸಿದ್ಧ ಜಾತ್ರೆಗಳ ಪಟ್ಟಿಯಲ್ಲಿರುವ ಶ್ರೀಕ್ಷೇತ್ರ ಉಳವಿ ಚೆನ್ನಬಸವೇಶ್ವರ ಜಾತ್ರೆಯ ದಿನಾಂಕ ನಿಗದಿಯಾಗಿದೆ. ಉಳವಿ ಜಾತ್ರೆಯು ಫೆಬ್ರುವರಿ 4ರಂದು ಶುರುವಾಗಲಿದ್ದು, ಫೆ 13ರ ಸಂಜೆ ರಥೋತ್ಸವ ನಡೆಯಲಿದೆ.
ಈ ಬಾರಿ ಎತ್ತಿನಗಾಡಿಗೆ ಮಾತ್ರ ಅವಕಾಶ!
ಚೆನ್ನ ಬಸವಣ್ಣನ ಸಭಾ ಭವನದಲ್ಲಿ ಜೊಯಿಡಾ ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. `ಈ ಬಾರಿ ಎತ್ತಿನಗಾಡಿಗಳಿಗೆ ಅಷ್ಟೇ ಅವಕಾಶ ನೀಡಲಾಗುತ್ತಿದ್ದು, ಬೇರೆ ಪ್ರಾಣಿಗಳನ್ನು ಬಳಸಿಕೊಂಡು ಚಕ್ಕಡಿ ಗಾಡಿ ಮಾಡುವಂತಿಲ್ಲ’ ಎಂದು ಮಂಜುನಾಥ ಮುನ್ನೊಳ್ಳಿ ಸೂಚಿಸಿದರು. `ಬೆಲೆ ಬಾಳುವ ಬಂಗಾರ ಸೇರಿ ದುಬಾರಿ ಮೌಲ್ಯದ ಯಾವುದೇ ವಸ್ತುಗಳನ್ನು ಭಕ್ತರು ಜಾತ್ರೆಗೆ ತರಬಾರದು’ ಎಂದು ಎಚ್ಚರಿಸಿದರು. `ಜಾತ್ರೆಗೆ ಬರುವ ಜನ-ಜಾನುವಾರುಗಳಿಗೆ ತೊಂದರೆಯಾಗದAತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
ರಸ್ತೆ ಸರಿಪಡಿಸಿ.. ಪುಣ್ಯ ಕಟ್ಟಿಕೊಳ್ಳಿ!
ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಿದ್ದು, ಪೊಟೋಳಿ- ಗುಂದ- ಉಳವಿ ರಸ್ತೆ ಕೂಡಲೇ ಸರಿಪಡಿಸಿ ಎಂದು ಭಕ್ತರು ಸಲಹೆ ನೀಡಿದರು. ಕುಂಬಾರ ವಾಡಾ- ಉಳವಿ – ಶಿವಪುರ ರಸ್ತೆ ಪಡಿಸುವಂತೆಯೂ ಆಗ್ರಹಿಸಿದರು. ಕಿಂದ್ರಿ ತಿರುವು ಹಾಗೂ ವಡಕಲ್ ತಿರುವು ಸೇರಿದಂತೆ ಇನ್ನಿತರ ಹಲವು ತಿರುವುಗಳನ್ನು ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಕ್ರಮ ಜರುಗಿಸಲು ತಹಶೀಲ್ದಾರ್ ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚಿಸಿದರು.