ಮುಖ್ಯಮಂತ್ರಿ, ರಾಷ್ಟ್ರಪತಿ ಸೇರಿ ಹಲವು ಗಣ್ಯರಿಗೆ ಭದ್ರತೆ ಒದಗಿಸುತ್ತಿದ್ದ ಸಿಪಿಐ ಜಯರಾಜ ಅವರು ಇದೀಗ ರಾಷ್ಟ್ರಪತಿ ಪದಕ ಪಡೆಯಲು ಸಜ್ಜಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿಭಾಯಿಸಿದ್ದ ಜಯರಾಜ್ ಅವರ ಸೇವೆ ಗುರುತಿಸಿ ಇದೀಗ ಅವರನ್ನು ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದಾವಣಗೆರೆ ಮೂಲದ ಜಯರಾಜ್ ಅವರು ಪ್ರಸ್ತುತ ಬೆಂಗಳೂರಿನ ಗೋವಿಂದಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಾರೆ. ದಶಕದ ಹಿಂದೆ ಯಲ್ಲಾಪುರ ಹಾಗೂ ಅಂಕೋಲಾ ಪಿಎಸ್‌ಐ ಆಗಿ ಜಯರಾಜ ಅವರು ಜನಮನ್ನಣೆ ಪಡೆದಿದ್ದರು. ಪಿಎಸ್‌ಐ ಜಯರಾಜ ಆಗಿದ್ದ ಅವರು ಅವರು 2009ರಲ್ಲಿ ಪದೋನ್ನತಿ ಪಡೆದು ಸಿಪಿಐ ಆದರು. ಪಿಎಸ್‌ಐ ಆಗಿದ್ದ ಅವಧಿಯಲ್ಲಿ ತಮ್ಮ ಕ್ಷೇತ್ರದ ಎಲ್ಲಡೆ ಬುಲೆಟ್ ಬೈಕಿನಲ್ಲಿ ಸಂಚರಿಸಿ ಪಡ್ಡೆ ಹುಡುಗರನ್ನು ನಡುಗಿಸುತ್ತಿದ್ದರು. ಜಯರಾಜ್ ಅವರ ಬೈಕಿನ ಸದ್ದು ಕೇಳಿದರೆ ಪುಂಡ-ಪೋಕರಿಗಳು ಅಡಗುತ್ತಿದ್ದರು.
ಅಪರಾಧ ತಡೆ ವಿಷಯವಾಗಿ ಅವರು ಅಪಾರ ಕಾಳಜಿಹೊಂದಿದ್ದರು. ಉತ್ತರ ಕನ್ನಡ ಜಿಲ್ಲೆಯಿಂದ ಶಿವಮೊಗ್ಗಕ್ಕೆ ವರ್ಗವಾದ ಅವರು ಅಲ್ಲಿನ ರೌಡಿಸಂ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿದರು. ಈ ಹಿನ್ನಲೆ ರಾಜ್ಯ ಸರ್ಕಾರ 2005ರಲ್ಲಿ ಅವರಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿತ್ತು. ಜಯರಾಜ ಅವರು ತಮ್ಮ ದಟ್ಟ ನಿಲುವುಗಳ ಜೊತೆ ಮಾನವೀಯ ನೆಲೆಯನ್ನು ಹೊಂದಿದ್ದರು. ಹೀಗಾಗಿ ಜನಸಾಮಾನ್ಯರ ಆಶಯಗಳಿಗೆ ಅವರು ತ್ವರಿತವಾಗಿ ಸ್ಪಂದಿಸುತ್ತಿದ್ದರು.