ಕೋಳಿ ಆಹಾರವನ್ನು ಬಿಸಲಿಗೆ ಒಣಗಿಸುವ ವಿಷಯವಾಗಿ ಮೂವರು ಮಹಿಳೆಯರ ನಡುವೆ ಕಚ್ಚಾಟ ನಡೆದಿದೆ. ಈ ವಿಷಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ರಾಜಿ-ಸಂದಾನ ಬಗೆಹರಿಯದ ಕಾರಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಳಿಯಾಳದ ತತ್ವಣಗಿಯ ಸರಸ್ವತಿ ಮೇತ್ರಿ ಅವರು ಅದೇ ಊರಿನ ಅಲಬಂದ ದೇಸಾಯಿ ಅವರ ಕೊಟ್ಟಿಗೆ ಅಂಚಿನಲ್ಲಿ ಕೋಳಿಗಳಿಗೆ ಹಾಸುವ ತಟ್ಟು ಒಣಗಿಸಿದ್ದರು. ಇದಕ್ಕೆ ಪಕ್ಕದ ಮನೆಯ ಮೇರಿ ದೊಡ್ಡಮನಿ ಎಂಬಾತರು ತಕರಾರು ತೆಗೆದಿದ್ದರು.
`ಕೋಳಿ ಆಹಾರ ಕೆಟ್ಟ ವಾಸನೆ ಬರುತ್ತಿದ್ದು ಬೇರೆ ಕಡೆ ಒಣಗಿಸು’ ಎಂದು ಮೇರಿ ದೊಡ್ಡಮನಿ ತಾಕೀತು ಮಾಡಿದರು. `ನಿನ್ನ ಮನೆ ಅಂಗಳದಲ್ಲಿ ಒಣಗಿಸಿಲ್ಲ’ ಎಂದು ಸರಸ್ವತಿ ಮೇತ್ರಿ ಕೂಗಾಡಿದರು.
ಇವರಿಬ್ಬರ ಜಗಳ ನೋಡಿದ ಸರಸ್ವತಿ ಮೇತ್ರಿ ಅವರ ಅತ್ತೆ ನಾಗವ್ವ ಮೇತ್ರಿ `ನೆರೆಮನೆಯಾಕೆ ಜೊತೆ ಮಾತಿಗೆ ಇಳಿಯಬೇಡ’ ಎಂದು ಸರಸ್ವತಿ ಅವರಿಗೆ ಬುದ್ದಿ ಹೇಳಿ ಮನೆ ಒಳಗೆ ಕಳುಹಿಸಿದರು. ಮೇರಿ ದೊಡ್ಡಮನಿ ಅವರನ್ನು ಸಮಾದಾನ ಮಾಡುವ ಪ್ರಯತ್ನ ನಡೆಸಿದರು.
ಆದರೆ, ಸಿಟ್ಟಾದ ಮೇರಿ ದೊಡ್ಡಮನಿ ಕೈಯಲ್ಲಿ ಬಡಿಗೆ ಹಿಡಿದು `ನಿನ್ನ ಸೊಸೆಗೆ ಸರಿಯಾಗಿ ಬುದ್ದಿ ಹೇಳಲು ಬರುವುದಿಲ್ಲವಾ?’ ಎಂದು ಪ್ರಶ್ನಿಸಿದರು. ಮಾತನಾಡುವ ಮುನ್ನವೆ ನಾಗವ್ವ ಮೇತ್ರಿ ಅವರಿಗೆ ಬಡಿಗೆಯಿಂದ ಬಡಿಯಲು ಶುರು ಮಾಡಿದರು.
ಆಗ ಬೊಬ್ಬೆ ಕೇಳಿ ಹೊರಗೆ ಬಂದ ಸೊಸೆಗೂ ಮೇರಿ ದೊಡ್ಡಮನಿ ಬೈದಳು. ಕುಸಿದು ಬಿದ್ದ ಅತ್ತೆಯನ್ನು ರಕ್ಷಿಸಿದ ಸರಸ್ವತಿ ಮೇತ್ರಿ ಅವರನ್ನು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಜನವರಿ 13ರಂದು ಈ ಹೊಡೆದಾಟ ನಡೆದಿದ್ದು, ಅತ್ತೆ ಚೇತರಿಕೆ ನಂತರ ಸರಸ್ವತಿ ಮೇತ್ರಿ ಪೊಲೀಸ್ ದೂರು ನೀಡಿದ್ದಾರೆ.



