ಯಕ್ಷಗಾನ ವೇದಿಕೆಯ ಹಿಂದೆ 15ಕ್ಕೂ ಅಧಿಕ ಗುಡುಗುಡಿ ಮಂಡಲದ ಮೂಲಕ ದೊಡ್ಡ ಪ್ರಮಾಣದಲ್ಲಿ ಕಾನೂನುಬಾಹಿರ ಜೂಜಾಟ ನಡೆಯುತ್ತಿದ್ದು, ಯಕ್ಷಗಾನ ನೋಡಲು ಆಗಮಿಸಿದ ಪ್ರೇಕ್ಷಕರಿಗಿಂತಲೂ ಹೆಚ್ಚಿನ ಜನ ಜೂಜಾಟದಲ್ಲಿ ತೊಡಗಿದ್ದರು. ಈ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರಿಗೆ ಸಹ ತಿಳಿಸದೇ ಪೊಲೀಸ್ ಅಧೀಕ್ಷಕ ಎಂ ನಾರಾಯಣ ವಿಶೇಷ ತಂಡವನ್ನು ಅಲ್ಲಿ ಕಳುಹಿಸಿಕೊಟ್ಟಿದ್ದರಿಂದ ಜೂಜಾಡುತ್ತಿದ್ದವರೆಲ್ಲೂ ಕಾಡಿನ ಕಡೆ ಓಡಿ ದಿಕ್ಕಾಪಾಲಾದರು. ಕೊನೆಗೆ ಮೂವರು ಪೊಲೀಸರು ಸೇರಿ ಇಬ್ಬರನ್ನು ಹಿಡಿದಿದ್ದು, ಆ ಇಬ್ಬರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ!
ಕುಮಟಾ ತಾಲೂಕಿನ ಕುರಿಗದ್ದೆ ಗ್ರಾಮದ ಹರಿಬೀರ ದೇವಾಲಯ ಬಳಿ ಜನವರಿ 23ರಂದು ಯಕ್ಷಗಾನ ಆಯೋಜಿಸಲಾಗಿತ್ತು. ರಾತ್ರಿ 12.30 ಕಳೆದರೂ ಯಕ್ಷಗಾನಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರಿರಲಿಲ್ಲ. ಯಕ್ಷಗಾನ ನೋಡಲು ಬಂದ ಪ್ರೇಕ್ಷಕರನ್ನು ವೇದಿಕೆ ಹಿಂದಿನ ಕಾಡಿನ ಬಳಿ ಹಾಕಲಾಗಿದ್ದ ಗುಡುಗುಡಿ ಆಟ ಸೆಳೆದಿತ್ತು. ಬಹುತೇಕರು ಅಲ್ಲಿ ಹೋಗಿ ಸೂರ್ಯ-ಚಂದ್ರನ ಮೇಲೆ ಕಾಸು ಹಾಕಿ ಆಟ ಆಡುತ್ತಿದ್ದರು. ಅಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಅರಿವಿದ್ದರೂ ಅವರು `ಏನೂ ನಡೆದಿಲ್ಲ’ ಎಂಬoತೆ ಮೌನವಾಗಿದ್ದರು. ಸಿಕ್ಕಿಬಿದ್ದ ಜೂಜುಕೋರರು ಹೇಳಿಕೊಂಡಿರುವಂತೆ ಕಾನೂನುಬಾಹಿರ ಆಟಕ್ಕೆ ಪೊಲೀಸರು ಅನುಮತಿಯನ್ನೂ ನೀಡಿದ್ದರು!
ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ಫೋನ್ ಕರೆಯೊಂದು ಬಂದಿದ್ದು, ಜೂಜಾಟದ ಬಗ್ಗೆ ಅವರು ಮಾಹಿತಿ ನೀಡಿದ್ದರು. ಸ್ಥಳೀಯ ಪೊಲೀಸರ ಭದ್ರತೆಯಲ್ಲಿ ಈ ಆಟ ನಡೆಯುತ್ತಿರುವ ಬಗ್ಗೆಯೂ ಅವರು ದೂರಿದ್ದರು. ಹೀಗಾಗಿ ಸತ್ಯಾಸತ್ಯತೆಯ ಪರಿಶೀಲನೆಗಾಗಿ ಎಂ ನಾರಾಯಣ ಅವರು ಮೂವರು ಪೊಲೀಸ್ ಸಿಬ್ಬಂದಿಯ ತಂಡವನ್ನು ಅಲ್ಲಿ ಕಳುಹಿಸಿದರು. ಪೊಲೀಸರನ್ನು ಕಂಡ ಜನ ದಿಕ್ಕಾಪಾಲಾಗಿ ಓಡಿದರು. ಅದಾಗಿಯೂ ಕುಮಟಾ ಮಾಸೂರಿನ ಹರೀಶ ನಾಯ್ಕ ಹಾಗೂ ಮಿರ್ಜಾನಿನ ದತ್ತು ಅಂಬಿಗ ಸಿಕ್ಕಿ ಬಿದ್ದರು.
ಇನ್ನೂ ಕೆಲವರು ಕತ್ತಲೆಯಲ್ಲಿ ಪೊಲೀಸರ ಮೇಲೆಯೇ ದಾಳಿ ನಡೆಸಲು ಯತ್ನಿಸಿದರು. ಇಬ್ಬರನ್ನು ಹಿಡಿದ ಪೊಲೀಸರು ಹಾಗೂ-ಹೀಗು ತಪ್ಪಿಸಿಕೊಂಡು ನಂತರ ಸ್ಥಳೀಯ ಪೊಲೀಸರ ನೆರವು ಪಡೆದರು. ಅಷ್ಟರೊಳಗೆ ಉಳಿದ ಜೂಜುಕೋರರ ಜೊತೆ ನೆರೆದಿದ್ದ ಜನ ಸಹ ಕಾಡು ಸೇರಿದರು. 15ಕ್ಕೂ ಅಧಿಕ ಗುಡಗುಡಿ ಮಂಡಲ ಹಾಗೂ 10 ಸಾವಿರ ರೂಗಳಷ್ಟು ಹಣ ಅಲ್ಲಿ ಬಿದ್ದುಕೊಂಡಿದ್ದು, ಅವೆಲ್ಲವನ್ನು ಪೊಲೀಸರು ಒಟ್ಟು ರಾಶಿ ಮಾಡಿದರು. `ಪರ್ಮಿಶನ್ ಇದೆ ಅಂತ ಹೇಳಿದಕ್ಕೆ ಬಂದೆವು. ಪರಮೀಶನ್ ಇಲ್ಲ ಅಂದರೆ ಬರುತ್ತಲೇ ಇರಲಿಲ್ಲ’ ಎಂದು ಸಿಕ್ಕಿಬಿದ್ದ ಇಬ್ಬರು ಹೇಳಿ ಕೈ ಮುಗಿದರು. ಜೂಜಾಟಕ್ಕೆ `ಪರಮೀಶನ್ ಕೊಟ್ಟವರು ಯಾರು?’ ಎಂದು ಪ್ರಶ್ನಿಸಿದಾಗ ಪೊಲೀಸರ ಹೆಸರು ಹೇಳಿ ಮಾಮೂಲಿ ಪಡೆದು ಜೂಜಾಟಕ್ಕೆ ಅನುವು ಮಾಡಿಕೊಟ್ಟಿದ್ದ ಮರಿ ಪುಡಾರಿಯ ಹೆಸರು ಬಾಯ್ಬಿಟ್ಟರು!
‘ಆ ಮರಿ ಪುಡಾರಿಯ ಸುದ್ದಿಗೆ ಹೋಗುವುದು ಬೇಡ’ ಎಂದು ನಿರ್ಧರಿಸಿದ ಪೊಲೀಸರು ಜೂಜಾಟ ಪ್ರದೇಶದಲ್ಲಿ ಬಿದ್ದಿದ್ದ 12 ಪರಿಕ್ಕರಗಳ ಜೊತೆ ಸಿಕ್ಕಿಬಿದ್ದ ಆರೋಪಿಗಳಿಬ್ಬರ ಹೆಸರನ್ನು ನಮೂದಿಸಿ ಪ್ರಕರಣ ದಾಖಲಿಸಿದರು. ಗೋಕರ್ಣ ಪಿಐ ವಸಂತ ಆಚಾರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.