ಸರ್ಕಾರಿ ಶಾಲೆಗೆ ಸ್ವಂತ ವೆಚ್ಚದಲ್ಲಿ ಸಭಾ ಭವನ ನಿರ್ಮಿಸಿಕೊಟ್ಟ ಶಿಕ್ಷಕ ರಾಮಚಂದ್ರ ನಾಯ್ಕ ಹಾಗೂ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಹತ್ವದ ಸಾಧನೆ ಮಾಡಿದ ಸೆಜಲ್ ನಾಯ್ಕ ಯಲ್ಲಾಪುರದ ಕಾಳಮ್ಮನಗರದಲ್ಲಿ ನಡೆದ ಗಣರಾಜ್ಯೋತ್ಸವ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದರು. ಶಾಸಕ ಶಿವರಾಮ ಹೆಬ್ಬಾರ್ ಸಾಧಕರನ್ನು ಗೌರವಿಸಿದರು.
ಗಣಪತಿ ಗಲ್ಲಿಯ ಶಿಕ್ಷಕರಾಗಿರುವ ರಾಮಚಂದ್ರ ನಾಯ್ಕ ಅವರು ತಮ್ಮ ಶಾಲೆಗೆ 3 ಲಕ್ಷ ರೂ ವೆಚ್ಚ ಮಾಡಿ ಸ್ವಂತ ವೆಚ್ಚದಲ್ಲಿ ಸಭಾ ಭವನವನ್ನು ನಿರ್ಮಿಸಿಕೊಟ್ಟಿದ್ದಾರೆ. ಕಾಳಮ್ಮ ನಗರದ ಮೈದಾನದ ಸುತ್ತಲಿನ ಗಿಡಗಳು ಬಿಸಿಲಿಗೆ ಬಾಡುತ್ತಿರುವುದನ್ನು ಗಮನಿಸಿ ಅವರು ಟ್ಯಾಂಕರ್ ಮೂಲಕ ನೀರುಣಿಸಿದ್ದಾರೆ. ಇದರೊಂದಿಗೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಈ ಸೇವೆಯನ್ನು ಗುರುತಿಸಿ ಈ ದಿನ ಗೌರವಿಸಲಾಗಿದೆ.
ಇನ್ನೂ ಯಲ್ಲಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೈಟಿಎಸ್‌ಎಸ್ ಪ ಪೂ ಕಾಲೇಜಿನ ವಿದ್ಯಾರ್ಥಿನಿ ಸೆಜಲ್ ಸತೀಶ ನಾಯ್ಕ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಒಂದೇ ವರ್ಷದಲ್ಲಿ ರೊಲರ್ ಸ್ಕೇಟಿಂಗ್ ಡರ್ಬಿ ಸಿನಿಯರ್ ವಿಭಾಗದಲ್ಲಿ ಎರಡು ರಜತ ಪದಕವನ್ನು ಅವರು ಪಡೆದಿದ್ದಾರೆ. ಅವರ ಈ ಸಾಧನೆಯನ್ನು ಗುರುತಿಸಿ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾನಿಸಿದರು.
ಈ ವೇಳೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸಿದ ಹಾಗೂ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ತಹಶೀಲ್ದಾರ್ ಯಲ್ಲಪ್ಪಾ ಗೋಣೆನವರ್, ಪ.ಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ ಅಂಗಡಿ, ಸುನಂದಾ ದಾಸ್, ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಇನ್ನಿತರರು ವೇದಿಕೆಯಲ್ಲಿದ್ದರು. ರಾಮಚಂದ್ರ ನಾಯ್ಕ ಹಾಗೂ ಸೆಜಲ್ ಸತೀಶ ನಾಯ್ಕ ಅವರಿಗೆ ಗಣರಾಜ್ಯೋತ್ಸವ ವೇದಿಕೆಯಲ್ಲಿ ಗೌರವ ಸಿಕ್ಕಿರುವುದಕ್ಕಾಗಿ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ, ಉಪಾಧ್ಯಕ್ಷ ನವೀನ ಜಿ ನಾಯ್ಕ, ಮಾಜಿ ಅಧ್ಯಕ್ಷ ಬಾಲಕೃಷ್ಣ ಎಸ್ ನಾಯ್ಕ ಸಂತಸ ವ್ಯಕ್ತಪಡಿಸಿದರು.