`ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತವಾಗುತ್ತಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಜನರ ಸಾವು-ನೋವು ತಪ್ಪಿಸುವುದಕ್ಕಾಗಿ ಹೆದ್ದಾರಿ ಸುರಕ್ಷತೆಗೆ ಆದ್ಯತೆ ಒದಗಿಸಬೇಕು’ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಒತ್ತಾಯಿಸಿದ್ದಾರೆ.
`ಮೊನ್ನೆ ಯಲ್ಲಾಪುರದ ಗುಳ್ಳಾಪುರದ ಬಳಿ ಲಾರಿ ಪಲ್ಟಿಯಾಗಿ 10 ಜನ ಸಾವನಪ್ಪಿದ್ದಾರೆ. ಇದನ್ನು ಹೊರತುಪಡಿಸಿಯೂ ಜಿಲ್ಲೆಯಲ್ಲಿ ವಾಹನ ಪಲ್ಟಿ, ಮುಖಾಮುಖಿ ಡಿಕ್ಕಿ ಸಾಮಾನ್ಯವಾಗಿದೆ. ಕಟ್ಟುನಿಟ್ಟಾಗಿ ನಿಯಮ ಪಾಲನೆ ಆಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ನಿಯಮ ಪಾಲನೆಗೆ ಸರ್ಕಾರ ಒತ್ತು ನೀಡಬೇಕು’ ಎಂದವರು ಆಗ್ರಹಿಸಿದ್ದಾರೆ.
`ಕರಾವಳಿ ಭಾಗದಿಂದ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ 63 ಪ್ರಮುಖ ರಸ್ತೆಯಾಗಿದೆ. ಪ್ರತಿನಿತ್ಯ ಸಾವಿರಾರು ಲಾರಿ, ಟ್ರಕ್, ಗ್ಯಾಸ್ ಟ್ಯಾಂಕರ್ ಗಳು ಓಡಾಡುತ್ತದೆ. ಅಲ್ಲದೇ ಪ್ರವಾಸಿ ತಾಣಗಳಾದ ಗೋವಾ, ಗೋಕರ್ಣ, ಮುರುಡೇಶ್ವರ ಸೇರಿದಂತೆ ಹಲವು ಪ್ರದೇಶ ತಲುಪಲು ಈ ರಸ್ತೆ ಅನಿವಾರ್ಯವಾಗಿದೆ. ಪ್ರತಿನಿತ್ಯ ನೂರಾರು ಬಸ್ಸುಗಳು ಈ ಮಾರ್ಗದಲ್ಲಿ ಓಡಾಡುತ್ತಿದ್ದು, ನಿತ್ಯ ಒಂದಿಲ್ಲೊoದು ಅಪಘಾತ ಉಂಟಾಗುತ್ತಿದೆ’ ಎಂದವರು ವಿವರಿಸಿದ್ದಾರೆ.
`ರಾಷ್ಟ್ರೀಯ ಹೆದ್ದಾರಿ 63ರಲ್ಲಿನ ಈ ಅಪಘಾತಗಳಿಗೆ ಕಿರಿದಾದ ರಸ್ತೆ ಕಾರಣ. ಪರಿಸರವಾದಿಗಳ ವಿರೋಧ, ಅರಣ್ಯ ಇಲಾಖೆ ವಿರೋಧ ಎಂಬ ನೆಪವೊಡ್ಡಿ ಹೆದ್ದಾರಿ ಅಗಲೀಕರಣ ಮಾಡುತ್ತಿಲ್ಲ. ಹೆದ್ದಾರಿ ಪ್ರಾಧಿಕಾರದವರು ಇರುವ ರಸ್ತೆಗೆ ಆಗಾಗ ಡಾಂಬರೀಕರಣ ಮಾಡುವ ಮೂಲಕ ಹಣ ದುರುಪಯೋಗ ಮಾಡುತ್ತಿದ್ದು, ಅದೇ ಹಣವನ್ನು ಸರಿಯಾಗಿ ಬಳಸಿಕೊಂಡು ರಸ್ತೆ ಅಗಲೀಕರಣ ನಡೆಸಬೇಕು’ ಎಂದವರು ಒತ್ತಾಯಿಸಿದ್ದಾರೆ.
`ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಗಲೀಕರಣ ಕಾರ್ಯ ಶುರು ಮಾಡಬೇಕು. ಇಲ್ಲವಾದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸುವುದು ಅನಿವಾರ್ಯ’ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಧ್ಯಕ್ಷರಾದ ರೋಷನ್ ಹರಿಕಂತ್ರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುದೇಶ್ ನಾಯ್ಕ, ಜಿಲ್ಲಾ ಉಪಾಧ್ಯಕ್ಷರಾದ ಸುನಿಲ್ ತಾಂಡೇಲ್, ಪ್ರದೀಪ್ ಶೆಟ್ಟಿ. ರಫೀಕ್ ಉದ್ದಾರ್, ಕಾರವಾರ ತಾಲೂಕಾ ಅಧ್ಯಕ್ಷ ಮೋಹನ್ ಉಳ್ಳೇಕರ್ ಎಚ್ಚರಿಕೆ ನೀಡಿದ್ದಾರೆ.