ಅಣ್ಣನ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ವಿದೇಶಿ ಉದ್ಯೋಗಿ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ.
ಹೊನ್ನಾವರದ ಸಂಶಿಯ ಜೀವನ್ ಮಿರಾಂಡ (27) ಅವರು ಜನವರಿ 22ರಂದು ಸಹೋದರ ಪ್ರೀತಂ ಮಿರಾಂಡ (26) ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದರು. ಪ್ರೀತಂ ಮಿರಾಂಡ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಊರಿಗೆ ಬಂದ ಕಾರಣ ಊರುರು ತಿರುಗಾಡುತ್ತಿದ್ದರು. ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಬೈಕ್ ಚಲಿಸುತ್ತಿದ್ದಾಗ ಎಸ್ ಡಿ ಎಂ ಕಾಲೇಜು ತಿರುವಿನ ಬಳಿ ಬೈಕು ನೆಲಕ್ಕೆ ಅಪ್ಪಳಿಸಿತು.
ಪರಿಣಾಮ ಬೈಕಿನ ಮೇಲಿದ್ದ ಇಬ್ಬರು ನೆಲಕ್ಕೆ ಬಿದ್ದು ಗಾಯಗೊಂಡರು. ಇದರಲ್ಲಿ ಬೈಕಿನ ಹಿಂಬದಿ ಸವಾರ ಪ್ರೀತಂ ಮಿರಾಂಡ ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡಿದ್ದರು. ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಅವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತು.
ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ನರಳಾಟ ನಡೆಸಿದ ಪ್ರೀತಂ ಮಿರಾಂಡ ಜನವರಿ 26ರಂದು ಸಾವನಪ್ಪಿದರು. ಆಸ್ಪತ್ರೆಯವರು ಈ ಬಗ್ಗೆ ಇಮೇಲ್ ಮೂಲಕ ಹೊನ್ನಾವರ ಪೊಲೀಸರಿಗೆ ಮಾಹಿತಿ ನೀಡಿದರು. ಹೊನ್ನಾವರ ಸಾಲ್ಕೋಡ ದರ್ಬೆಜಡ್ಡಿಯ ಗಣೇಶ ನಾಯ್ಕ ಅವರು ನೀಡಿದ ದೂರಿನ ಪ್ರಕಾರ ಈ ಹಿಂದೆ ಅಪಘಾತದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬೈಕ್ ಸವಾರನ ವಿರುದ್ಧ ಹೆಚ್ಚುವರಿ ಪ್ರಕರಣಗಳನ್ನು ಸೇರಿಸಿದರು.