ಟೋಕಿಯೋ ಒಲೆಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಜ್ ಚೋಪ್ರಾ ಅವರ ತರಬೇತುದಾರರಾದ ಕಾಶಿನಾಥ ನಾಯ್ಕ ಅವರು ತಮ್ಮ 25 ವರ್ಷದ ಸೇವೆ ಪೂರೈಸಿ ಸೇನೆಯಿಂದ ನಿವೃತ್ತರಾಗಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಬಳಿಯ ಬೆಂಗಲೆಯವರಾದ ಕಾಶಿನಾಥ ನಾಯ್ಕ ಅವರು ಬಿಎ ಓದಿದ್ದಾರೆ. ಮೊದಲು ಅವರು ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಅದಾದ ನಂತರ ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ನಿರಂತರ ಪ್ರಯತ್ನದ ಫಲವಾಗಿ ಕಾರ್ಗಿಲ್ ಯುದ್ದದ ಅಂತ್ಯದ ವೇಳೆ ಅವರು ಸೇನೆ ಸೇರಿದ್ದರು. ಆಗ ಅಲ್ಲಿನ ಕ್ರೀಡಾ ವಿಭಾಗ ಅವರನ್ನು ಆಕರ್ಷಿಸಿತು. ಆ ಅವಧಿಯಲ್ಲಿ ಅವರಿಗೆ ಅಲ್ಲಿ ಯಾವುದೇ ವಿಶೇಷ ತರಬೇತುದಾರರು ಇರಲಿಲ್ಲ. ಆಗ ಅಲ್ಲಿನ ಸೈನಾಧಿಕಾರಿಗಳ ಮಾರ್ಗದರ್ಶನದಲ್ಲಿ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದರು.
ಕ್ರೀಡಾ ವಿಭಾಗದಲ್ಲಿಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಕ್ರೀಡಾಪಟು ನಿರಜ್ ಚೋಪ್ರಾ ಅವರಿಗೆ ಕಾಶಿನಾಥ ನಾಯ್ಕ ಅವರು ಗುರುವಾಗಿದ್ದರು. ಜಾವಲಿನ್ ಎಸೆತದಲ್ಲಿ ಚಾಣಾಕ್ಷತನ ಪಡೆದಿರುವ ಕಾಶಿನಾಥ ನಾಯ್ಕ ಅವರು ಸೈನಿಕ ವೃತ್ತಿಯಲ್ಲಿ ಸಹ ಅಷ್ಟೇ ಶಿಸ್ತಿನಿಂದ ಇರುತ್ತಿದ್ದರು. 2010ರಲ್ಲಿ ಜರುಗಿದ 19ನೇ ಕಾಮನ್ ವೆಲ್ತ್ ಪಂದ್ಯಾಟದಲ್ಲಿ ಕಂಚು ಪದಕವನ್ನು ಅವರು ಗೆದ್ದಿದ್ದಾರೆ. ಆರ್ಮಿ ಕ್ರೀಡಾ ತರಬೇತಿ ಶಿಬಿರದಲ್ಲಿ ಅಥ್ಲೇಟಿಕ್ ತರಬೇತುದಾರರಾಗಿ ಈಗ ಗೋಡಪಡಿ, ಪೂಣೆಯಲ್ಲಿ ಸಹ ಅವರು ಕ್ರೀಡಾ ತರಬೇತದಾರನಾಗಿದ್ದಾರೆ. ಅವರ ಪ್ರತಿಭೆಗೆ 2012ರಲ್ಲಿ ಎಕಲವ್ಯ ಪ್ರಶಸ್ತಿ, 2011ರಲ್ಲಿ ಕರ್ನಾಟಕ ರಾಜ್ಯೋತ್ಸವ, 2023ರಲ್ಲಿ ಗುರು ವಿದ್ಯಾರಣ್ಯ ಪ್ರಶಸ್ತಿಗಳು ಸಿಕ್ಕಿವೆ. ಈವರೆಗೆ ಕಾಶೀನಾಥ ನಾಯ್ಕ ಅವರು 19 ಅಂತರಾಷ್ಟಿçÃಯ ಕ್ರೀಡಾ ಪಂದ್ಯಾಟದಲ್ಲಿ ಭಾಗವಹಿಸಿದ್ದಾರೆ. 2010ರಲ್ಲಿ ದಕ್ಷಿಣಾ ಏಷ್ಯಾ ಕ್ರೀಡಾ ಕೂಟದಲ್ಲಿ ಬಂಗಾರ ಪದಕ, 2008ರಲ್ಲಿ ಏಷಿಯನ್ ಗ್ರಾಂಡ್ ಪೀಕ್ಸ್ ಕ್ರೀಡಾ ಕೂಟದಲ್ಲಿ ಬೆಳ್ಳಿ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಸೇನೆಯಲ್ಲಿದ್ದುಕೊoಡೇ ಅವರು 2013ರಿಂದ ಆರ್ಮಿ ಕ್ರೀಡಾ ತರಬೇತಿ ಸಂಸ್ಥೆಯ ತರಬೇತದಾರರಾಗಿದ್ದು, ಅಂತರರಾಷ್ಟ್ರೀಯ ಕ್ರೀಡಾ ಪಟುಗಳಾದ ನಿರಜ ಚೋಪ್ರ, ಅಣ್ಣು ರಾಣಿ, ರಾಜೇಶ ಕುಮಾರ ಬಿಂದ್, ದೇವೆಂದರ ಸಿಂಗ, ಸಮರ್ಜಿತ ಸಿಂಗ್, ಅಮಿತ್ ಕುಮಾರ ರಾಹಿತ್ ಯಾದವ, ಮನು ಡಿ ಪಿ, ಅನಿಲ್ ಕುಮಾರ, ಉತ್ತಮ ಪಾಟೀಲ್ ಮೊದಲಾದವರಿಗೆ ವಿಶೇಷ ತರಬೇತಿ ನೀಡಿದ್ದಾರೆ. ಜನವರಿ 31ರಂದು ಅವರು ಸೇನೆಯಿಂದ ನಿವೃತ್ತರಾಗಲಿದ್ದಾರೆ.
`ಅತ್ಯಂತ ಹಿಂದುಳಿದ ಪ್ರದೇಶದಿಂದ ಬಂದು ಉನ್ನತ ಮಟ್ಟದ ಸಾಧನೆ ಮಾಡಿದ ಕ್ರೀಡಾಪಟು, ಸೈನಿಕ ಮತ್ತು ಕ್ರೀಡಾ ತರಬೇತಿದಾರ ಕಾಶಿನಾಥ ನಾಯ್ಕ ಅವರ ಸಾಧನೆ ಅಪಾರ. ಅವರಲ್ಲಿನ ಕೌಶಲ್ಯವನ್ನು ಸರ್ಕಾರ ಮುಂದೆಯೂ ಬಳಕೆಗೆಪಡೆಯಬೇಕು’ ಎಂದು ಸ್ಪಂದನಾ ಲೀಗಲ್ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.