ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಎಲ್ಲಾ ಬಗೆಯ ಜೂಜಾಟಗಳಿಗೆ ಪೊಲೀಸರು ತಡೆ ಒಡ್ಡುವ ಪ್ರಯತ್ನ ನಡೆಸಿದ್ದಾರೆ. 2024ರ ಡಿಸೆಂಬರ್ ಅಂತ್ಯದವರೆಗೆ 272 ಮಟ್ಕಾ ಆಡಿಸುವವರ ಮೇಲೆ ದಾಳಿ ನಡೆದಿದೆ. ಈ ಎಲ್ಲಾ ಕಡೆ ಪೊಲೀಸರು ಮಟ್ಕಾ ಚೀಟಿ ಬರೆಯುತ್ತಿದ್ದ ಬಾಲ್ ಪೆನ್ನುಗಳನ್ನು ವಶಕ್ಕೆ ಪಡೆದಿದ್ದಾರೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ 2024ನೇ ಸಾಲಿನಲ್ಲಿ 315 ಜನ ಮಟ್ಕಾ ಆಡಿಸಿ ಸಿಕ್ಕಿ ಬಿದ್ದಿದ್ದಾರೆ. ಈ ದಾಳಿಗಳಿಂದ 5,28,955 ರೂ ಹಣ ಜಪ್ತಿಯಾಗಿದೆ. ಇದರೊಂದಿಗೆ ಅನಧಿಕೃತ ಲಾಟರಿ ವಿಷಯವಾಗಿ ಒಂದು ಪ್ರಕರಣ ದಾಖಲಾಗಿದ್ದು, ಒಬ್ಬರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ. 400ರೂ ಬೆಲೆಯ ಲಾಟರಿ ಟಿಕೆಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊನೆ ಎಚ್ಚರಿಕೆ:
ಮಟ್ಕಾ ಹಾಗೂ ಲಾಟರಿ ಆಟ ಸಾಮಾಜಿಕ ಪಿಡುಗು ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹೇಳಿದ್ದಾರೆ. ಇಂಥ ಆಟದಲ್ಲಿ ಭಾಗಿಯಾದವರನ್ನು ಪೊಲೀಸ್ ಕಾಯ್ದೆ ಪ್ರಕಾರ ಗಡಿಪಾರು ಮಾಡುವುದಾಗಿಯೂ ಅವರು ಎಚ್ಚರಿಸಿದ್ದಾರೆ.