ವಿವಿಧ ನಗರ ಹಾಗೂ ಪಟ್ಟಣಗಳಿಗೆ ಸಂಚರಿಸಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದವರನ್ನು ಆಯಾ ಊರಿನ ಜನ ಪತ್ತೆ ಮಾಡಿದ್ದು, ಕುಮಟಾ ಪೊಲೀಸರು ಕಲಬೆರೆಕೆ ತುಪ್ಪ ಮಾರಾಟಕ್ಕೆ ಬಂದಿದ್ದ ವ್ಯಾಪಾರಿ ಚಳಿ ಬಿಡಿಸಿದ್ದಾರೆ.
ಕುಮಟಾದ ಸಿದ್ದನಭಾವಿ ಬಳಿ ಬೆಲ್ಲದ ಡಬ್ಬಿ ಗಾತ್ರದಲ್ಲಿ ಶಂಕರಪ್ಪ ಎಂಬಾತರು ತುಪ್ಪ ತಂದಿದ್ದರು. ಪ್ರತಿ ಕೆಜಿಗೆ 400ರೂಪಾಯಿಯಿಂದ 600ರೂಪಾಯಿವರೆಗೆ ಅದನ್ನು ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ತುಪ್ಪ ಸಿಕ್ಕಿರುವುದರಿಂದ ಜನ ಮುಗಿ ಬಿದ್ದು ಖರೀದಿಸಿದರು. ಮನೆಗೆ ಹೋಗಿ ಬಳಸಿದ ನಂತರ ಅದು ತುಪ್ಪದ ಹಾಗೇ ಇರಲಿಲ್ಲ!
ಇದರಿಂದ ತುಪ್ಪ ಖರೀದಿಸಿದ ಗ್ರಾಹಕರು ಮರಳಿ ವ್ಯಾಪಾರಿಗಳ ಬಳಿ ಬಂದು ವಿಚಾರಿಸಿದರು. ಕಲಬೆರಕೆ ತುಪ್ಪ ಮಾರಾಟದ ಬಗ್ಗೆ ಪೊಲೀಸರಿಗೆ ಸಹ ದೂರು ಸಲ್ಲಿಸಿದರು. ಪೊಲೀಸರು ಶಿರಸಿಯಲ್ಲಿದ್ದ ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿಭಟ್ಟ ಅವರನ್ನು ಕರೆಯಿಸಿದರು. ಅವರು ಸಹ ಅಲ್ಲಿದ್ದ ತುಪ್ಪವನ್ನು ನೋಡಿ ಅನುಮಾನ ವ್ಯಕ್ತಪಡಿಸಿದರು.
ಆದರೆ, ತುಪ್ಪವನ್ನು ಪರೀಕ್ಷೆಗೆ ಒಳಪಡಿಸದೇ ಏನನ್ನು ಹೇಳುವ ಹಾಗಿರಲಿಲ್ಲ. ಹೀಗಾಗಿ ತುಪ್ಪದ ಮಾದರಿಯನ್ನು ಸಂಗ್ರಹಿಸಿ ಅದನ್ನು ಬೆಳಗಾವಿ ಪ್ರಯೋಗಾಲಯಕ್ಕೆ ರವಾನಿಸಿದರು. ಹೊನ್ನಾವರದ ಲಾಡ್ಜಿನಲ್ಲಿ ತಂಗಿದ 8 ಜನ ಹಲವು ಕಡೆ ಸಂಚರಿಸಿ ಈ ತುಪ್ಪ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯಿದೆ. ಬಳ್ಳಾರಿ ಮೂಲದ ಈ ಜನ ಲಾಡ್ಜಿನಲ್ಲಿಯೇ ಅಸಲಿ ತುಪ್ಪಕ್ಕೆ ಡಾಲ್ಡಾ ಮಿಶ್ರಣ ಮಾಡಿ ಬೀದಿ ಬೀದಿ ಸಂಚರಿಸಿ ವ್ಯಾಪಾರ ನಡೆಸುತ್ತಿದ್ದಾರೆ ಎಂಬ ದೂರಿದೆ.



