ಜಿಲ್ಲಾಧಿಕಾರಿ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತವಾಗಿದೆ. ಫ್ಲೈ ಓವರ್ ಕಂಬಕ್ಕೆ ಕಾರು ಗುದ್ದಿದ ಪರಿಣಾಮ ಕಾರಿನ ಚಾಲಕ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಕಾರವಾರ ಕಾಜುಭಾಗ ಬಳಿಯ ಕೆಂಚಾ ರಸ್ತೆಯ ಲಕ್ಷ್ಮೀಶ ಕಳಸ (27) ಜನವರಿ 30ರ ರಾತ್ರಿ ಕಾರು ಓಡಿಸುತ್ತಿದ್ದರು. ಕೋಡಿಭಾಗ ಕಡೆಯಿಂದ ಹೊರಟ ಅವರು ಸರ್ವೀಸ್ ರಸ್ತೆಯಲ್ಲಿ ಕಾರವಾರ ಕಡೆಗೆ ತೆರಳುತ್ತಿದ್ದರು. ಆಗ, ಏಕಾಏಕಿ ಆಕಳೊಂದು ಅವರ ಕಾರಿಗೆ ಅಡ್ಡ ಬಂದಿದ್ದು ಅದನ್ನು ತಪ್ಪಿಸುವ ಭರದಲ್ಲಿ ಫ್ಲೈ ಓವರ್ ಕಂಬಕ್ಕೆ ಕಾರು ಗುದ್ದಿದರು.
ಕಾರಿನ ವೇಗ ಹೆಚ್ಚಿದ್ದ ಕಾರಣ ವಾಹನದ ಮುಂಬಾಗ ಜಖಂ ಆಯಿತು. ಜೊತೆಗೆ ಕಾರು ಚಲಾಯಿಸುತ್ತಿದ್ದ ಲಕ್ಷ್ಮೀಶ ಕಳಸ ಅವರ ತಲೆಗೂ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ತಲೆ ಎಡಭಾಗಕ್ಕೆ ನೋವು ಮಾಡಿಕೊಂಡ ಲಕ್ಷ್ಮೀಶ ಕಳಸ ಮೂಗಿನಿಂದ ರಕ್ತ ಸುರಿದ ಕಾರಣ ಆಸ್ಪತ್ರೆ ಸೇರಿದರು. ಅಪಘಾತದ ಬಗ್ಗೆ ಬಾಡ ನಂದನಗದ್ದಾ ಐಟಿಐ ಕಾಲೇಜು ಬಳಿಯ ಗುತ್ತಿಗೆದಾರ ಗಜೇಂದ್ರ ಬಿಣಗೇಕರ್ ಪೊಲೀಸರಿಗೆ ದೂರು ನೀಡಿದರು.





