ಉತ್ತರ ಕನ್ನಡ ಜಿಲ್ಲೆಯ ಸರಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಂಗಳೂರಿನ ಸಮಾನ ಮನಸ್ಕರ ತಂಡ ದುಡಿಯುತ್ತಿದೆ.
ಕಳೆದ ಐದು ವರ್ಷಗಳಿಂದ ಅಂಕೋಲಾ, ಯಲ್ಲಾಪುರ, ಹಳಿಯಾಳ ಹಾಗೂ ಜೊಯಿಡಾದಲ್ಲಿನ ಸರಕಾರಿ ಶಾಲಾ ಮಕ್ಕಳನ್ನು ಗುರಿಯಾಗಿರಿಸಿಕೊಂಡು `ವನ ಚೇತನ’ ತಂಡ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಗುಡ್ಡಗಾಡಿನ ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಸಮಾನ ಮನಸ್ಕರು ಸೇರಿ ಶ್ರಮಿಸುತ್ತಿದ್ದಾರೆ. ಮಂಗಳೂರಿನ `ಸಹ್ಯಾದ್ರಿ ಸಂಚಯ’ ಎಂಬ ತಂಡ ಜಿಲ್ಲೆಯ ಹಲವಡೆ `ವನ ಬೆಳಕು’ ಕಾರ್ಯಕ್ರಮ ನಡೆಸಿ ಮಕ್ಕಳಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಿದೆ. ಮುಖ್ಯವಾಗಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಕೆಲಸ ಮಾಡಿದೆ.
ಎರಡು ವರ್ಷದ ಹಿಂದೆ ಎಲ್ಲಡೆ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದ್ದರೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಅಂಕೋಲಾ ಹಾಗೂ ಜೊಯಿಡಾದ ಅಡವಿ ಮಕ್ಕಳಿಗೆ ಇದು ಹೆಚ್ಚಿನ ಪರಿಣಾಮ ಬೀರಲಿಲ್ಲ. ಶಾಲೆಗೆ ಹೋಗಿ ಕಲಿಯಬೇಕಿದ್ದ ಚಿಣ್ಣರನ್ನು ಗುಡ್ಡ ಬೆಟ್ಟಗಳಿಗೆ ಕರೆದೊಯ್ದು ಅವರಿಗೆ ಪರಿಸರ ಪಾಠ ಮಾಡಿದ ಹಿರಿಮೆ ಮಂಗಳೂರಿನ ಸಹ್ಯಾದ್ರಿ ಸಂಚಯ ತಂಡದವರದ್ದಾಗಿದೆ. ಗುಡ್ಡಗಾಡಿನ ಮಕ್ಕಳಿಗೆ ಶಾಲೆಗೆ ತೆರಳಿ ಶಿಕ್ಷಣ ಪಡೆಯುವುದ ಕಷ್ಟ ಎಂಬ ಪರಿಸ್ಥಿತಿ ಇದ್ದಾಗ ವನ ಬೆಳಕು ತಂಡದವರು ಲಾಕ್ ಡೌನ್ ಹಾಗೂ ಅದರ ನಂತರದ ಅವಧಿಯಲ್ಲಿ ಮಕ್ಕಳ ಮನೆ ಬಾಗಲಿಗೆ ತೆರಳಿ ಪಾಠ ಹೇಳಿಕೊಟ್ಟಿದ್ದಾರೆ. ಪಠ್ಯದ ಜೊತೆ ಜೊತೆಗೆ ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳ ಬಗ್ಗೆಯೂ ತಿಳಿಸಿದ್ದಾರೆ.
“ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ನಗರದ ಮಕ್ಕಳಿಗೆ ಆನಲೈನ್ ಮೂಲಕ ಶಿಕ್ಷಣ ನೀಡಲಾಗುತ್ತದೆ. ಆದರೆ, ಗ್ರಾಮೀಣ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಎಂಬುದು ಕೂಡ ಮರಿಚಿಕೆಯಾಗಿದೆ. ಹೀಗಾಗಿ ಗ್ರಾಮೀಣ ಬುಡಕಟ್ಟು ಸಮುದಾಯದ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಕ್ರಿಯಾತ್ಮಕ ಚಟುವಟಿಕೆಗಳನ್ನು ಹೊಂದಿದ ಕಾರ್ಯಕ್ರಮ ನಡೆಸಲಾಗಿತ್ತು. ಈ ವರ್ಷವೂ ವನ ಚೇತನ ವಿವಿಧ ಕಾರ್ಯಕ್ರಮ ಆಯೋಜಿಸಿದೆ” ಎಂದು ವನ ಬೆಳಕು ಸಂಯೋಜಕ ದಿನೇಶ್ ಹೊಳ್ಳ ವಿವರಿಸಿದರು. “ಮಕ್ಕಳಿಗೆ ಪಾಠದ ಜೊತೆ ಆಟವೂ ಮುಖ್ಯ. ಹೀಗಾಗಿ ಆಟ ಆಡಿಸುತ್ತಲೇ ಪಾಠ ಹೇಳಿಕೊಡುವ ವಿನೂತನ ಪ್ರಯೋಗ ಇದಾಗಿದೆ” ಎಂದರು.
`ಅಡವಿ ಮಕ್ಕಳ ಸೃಜನ ವಿಕಸನ’ ಎಂಬ ವಾಕ್ಯದಡಿ ನಾಲ್ಕು ತಾಲೂಕಿನ ಐದಾರು ಹಳ್ಳಿಗಳಲ್ಲಿ ನಡೆದ ವನ ಬೆಳಕು ಶಿಬಿರದಲ್ಲಿ ಚಿತ್ರ ರಚನೆ, ಗಾಳಿಪಟ ತಯಾರಿಕೆ, ನೃತ್ಯ-ಹಾಡು, ರಸಪ್ರಶ್ನೆ ಮೊದಲಾದ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಮಕ್ಕಳ ಜೊತೆ ಪೋಷಕರಿಗೆ ಸಹ ತರಬೇತಿ ನೀಡುತ್ತಿರುವುದು ವನ ಬೆಳಕು ತಂಡದವರ ವಿಶೇಷ.
– ಅಚ್ಯುತಕುಮಾರ ಯಲ್ಲಾಪುರ
Discussion about this post