ಕೆನರಾ ಸರ್ಕಲ್’ನಲ್ಲಿ ಮರಗಳ ಬುಡ ಬಿಟ್ಟು ಶಿರ ಮಾತ್ರ ಕಡಿದರೆ ಅದು ಅಪರಾಧವೇ ಅಲ್ಲ!
ಮುಂಡಗೋಡಿನ ಏತ ನೀರಾವರಿ ಯೋಜನೆಗೆ ಸಂಬoಧಿಸಿ ವಿದ್ಯುತ್ ಒಯ್ಯಲು ಮರಗಳ ಶಿರ ಕಡಿಯಲಾಗಿದೆ. ಶಿರಸಿ-ಯಲ್ಲಾಪುರ-ಉಮ್ಮಚ್ಗಿ-ಕಾತೂರು ಮಾರ್ಗವಾಗಿ ರಸ್ತೆ ಪಕ್ಕದಲ್ಲಿ ಮರಗಳ ಮಾರಣಹೋಮ ನಡೆದಿದ್ದು, ಮರಕ್ಕೆ ಇರುವ ಕೊಂಚ ಎಲೆಬಿಟ್ಟು ಮೇಲ್ಬಾಗವನ್ನು ತುಂಡರಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆ ಅನುಮತಿಯನ್ನು ನೀಡಿಲ್ಲ. ಮರ ಕಡಿದವರ ವಿರುದ್ಧ ಕ್ರಮವನ್ನು ಜರುಗಿಸಿಲ್ಲ.
ಇನ್ನೂ ವಿಶೇಷ ಎಂದರೆ ಕಟಾವಿಗೆ ಒಳಗಾದ ಮರದ ನಾಟ ಎಲ್ಲಿ ಹೋಯಿತು? ಎಂಬುದು ಯಾರಿಗೂ ಗೊತ್ತಿಲ್ಲ. ಕದ್ದು ಸಾಗಿಸಿದವರು ಸಹ `ತಮಗೆನು ಗೊತ್ತಿಲ್ಲ’ ಎಂಬoತೆ ಮೌನವಾಗಿದ್ದು, ಅಕ್ರಮ ನಡೆದರೂ ಕ್ರಮ ಕೈಗೊಳ್ಳದ ಅಧಿಕಾರಿಗಳತ್ತ ಹೋರಾಟಗಾರರು ಬೊಟ್ಟು ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕೃಷಿಕರು ತೋಟಕ್ಕೆ ಸೊಪ್ಪು ಹಾಕಲು ಸೊಪ್ಪಿನ ಬೆಟ್ಟದಲ್ಲಿರುವ ಮರದ ಸೊಪ್ಪು ಬೋಳಿಸಿದರೂ ಮನೆ ಬಾಗಿಲಿಗೆ ಅಧಿಕಾರಿಗಳು ಬರುತ್ತಾರೆ. ಆದರೆ, ಇಲ್ಲಿ ಮರದ ಬುಡ ಬಿಟ್ಟು ಸಂಪೂರ್ಣ ನಾಟಾ ಕದ್ದರೂ ಅರಣ್ಯಾಧಿಕಾರಿಗಳು ಪ್ರಶ್ನಿಸಿಲ್ಲ. ಹೀಗಾಗಿ `ಮರದ ಬುಡ ಬಿಟ್ಟು ಶಿರಭಾಗ ಕತ್ತರಿಸಿದರೆ ಅದು ಅಪರಾಧ ಅಲ್ಲ’ ಎಂದು ಜನ ವ್ಯಂಗ್ಯವಾಡುತ್ತಿದ್ದಾರೆ.
Discussion about this post