ಆಯುರ್ವೇದ ಆಸ್ಪತ್ರೆಯ ಹಳೆಯ ಲ್ಯಾಂಡ್‌ಲೈನ್ ಸಂಪರ್ಕ ಸ್ಥಗಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದ ಸೂಚನೆ ಮೇರೆಗೆ ಅದನ್ನು ರಿಪೇರಿ ಮಾಡಲಾಗಿದೆ!
ಶಿರಸಿಯ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿ ಡಾ ರವಿಕಿರಣ ಪಟವರ್ಧನ್ ಅವರು ಆಯುರ್ವೇದ ಆಸ್ಪತ್ರೆ ಹೊಂದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಅವರು 08384-225836 ಸಂಖ್ಯೆಯ ಬಿಎಸ್‌ಎನ್‌ಎಲ್ ಫೋನ್ ಸಂಪರ್ಕ ಪಡೆದಿದ್ದಾರೆ. ಅನೇಕ ರೋಗಿಗಳು ಈ ಸಂಖ್ಯೆಗೆ ಫೋನ್ ಮಾಡಿ ಬರುತ್ತಾರೆ. ಕೆಲವರು ಫೋನ್ ಮೂಲಕವೇ ಸಲಹೆ ಪಡೆಯುತ್ತಾರೆ.
ಆದರೆ, ಕಳೆದ ಜುಲೈ ತಿಂಗಳಿನಲ್ಲಿ ಅವರ ಫೋನು ಹಾಳಾಗಿತ್ತು. ಬಿಎಸ್‌ಎನ್‌ಎಲ್ ಕಚೇರಿಗೆ ದೂರು ನೀಡಿದರೂ ಸ್ಪಂದಿಸಿರಲಿಲ್ಲ. ಖಾಸಗಿ ಸಹಭಾಗಿತ್ವದ FTTH ಸಂಪರ್ಕ ಪಡೆಯುವಂತೆ ಅಲ್ಲಿನ ಅಧಿಕಾರಿಗಳೇ ಸಲಹೆ ನೀಡಿದ್ದು, ಫೋನ್ ನಂ ಬದಲಾಗುವ ವಿಷಯ ಅರಿತು ಡಾ ರವಿಕಿರಣ ಪಟವರ್ಧನ್ ಅವರು ಅದಕ್ಕೆ ಮನಸ್ಸು ಮಾಡಿರಲಿಲ್ಲ. ಅದಾದ ನಂತರ ಸಾಕಷ್ಟು ಸಲ ದೂರು ಕೊಟ್ಟರೂ ಬಿಎಸ್‌ಎನ್‌ಎಲ್ ಆ ಸಂಖ್ಯೆಯ ಸಂಪರ್ಕವನ್ನು ಸರಿ ಮಾಡಿರಲಿಲ್ಲ.
ಈ ನಡುವೆ ಡಾ ರವಿಕಿರಣ ಪಟವರ್ಧನ ಅವರು ಸ್ಥಳೀಯ ಸಂಸದರ ಕಚೇರಿಗೆ ದೂರು ನೀಡಿದರು. ಅವರ ಸೂಚನೆ ಮೇರೆಗೆ ಒಮ್ಮೆ BSNL ಅಧಿಕಾರಿಗಳು ಸಂಪರ್ಕ ಸರಿಪಡಿಸಿದರು. ಆದರೆ, ಪೂರ್ಣ ಪ್ರಮಾಣದಲ್ಲಿ ಫೋನ್ ಸರಿಯಾಗಿರಲಿಲ್ಲ. ಡಿಸೆಂಬರ್ ಅಂತ್ಯಕ್ಕೆ ಮತ್ತೆ ಸಂಪರ್ಕ ಕಡಿತಗೊಂಡಿತು. ಆಗ, ಬಿಎಸ್‌ಎನ್‌ಎಲ್ ಸಂಸ್ಥೆಯ ವಾಟ್ಸಪ್ ದೂರು ವಿಭಾಗದ ಮೂಲಕ ದುರಸ್ತಿಗೆ ಅರ್ಜಿ ಸಲ್ಲಿಸಿದರು. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.
ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಗೆ ಡಾ ರವಿಕಿರಣ ದೂರು ಸಲ್ಲಿಸಿದರು. `ನಾನು ವೈದ್ಯನಾಗಿದ್ದು, ಅನೇಕ ರೋಗಿಗಳು ಸಂಪರ್ಕಿಸಲು ಲ್ಯಾಂಡ್‌ಲೈನ್ ಬಳಸುತ್ತಾರೆ’ ಎಂದವರು ವಿವರಿಸಿದರು. ಆಗ ಬಿಎಸ್‌ಎನ್‌ಎಲ್ ಅಧಿಕಾರಿಗಳು ಡಾ ರವಿಕಿರಣ ಅವರನ್ನು ಸಂಪರ್ಕಿಸಿ `ಕಂಬ ಹಾಳಾಗಿದೆ. ಕೇಬಲ್ ಸರಿಯಿಲ್ಲ’ ಎಂಬ ಸಬೂಬು ನೀಡಿದ್ದರು. ಆದರೆ, ಅದಕ್ಕೆ ಒಪ್ಪದ ಅವರು `ಗ್ರಾಹಕನಿಗೆ ನೀಡಬೇಕಾದ ಸೇವೆ ನೀಡಿ’ ಎಂದು ಪಟ್ಟು ಹಿಡಿದರು.
ಈ ಹಂತದಲ್ಲಿ ಅವರು ಪ್ರಧಾನಮಂತ್ರಿ ಕಾರ್ಯಾಲಯದ ವೆಬ್‌ಸೈಟ್ ಮೂಲಕ ಫೆಬ್ರುವರಿ 5ರ ದೂರು ಸಲ್ಲಿಸಿದರು. ದೂರು ನೀಡಿದ 33 ಗಂಟೆ ಅವಧಿಯಲ್ಲಿ ಅವರ ಲ್ಯಾಂಡ್ ಲೈನ್ ಮೊದಲಿನಂತೆ ಸದ್ದು ಮಾಡಿತು. ಮೋದಿ ಕಾರ್ಯಾಲಯದ ಸೂಚನೆ ಮೇರೆಗೆ ಬಿಎಸ್‌ಎನ್‌ಎಲ್ ತಂಡದವರೇ ಆಗಮಿಸಿ ಹಳೆಯ ಲ್ಯಾಂಡ್‌ಲೈನ್ ದುರಸ್ಥಿ ಮಾಡಿದರು.



