ಹಣದ ಅಡಚಣೆಯಿರುವ ಕಾರಣ ನಾಲ್ಕು ಜನರಿಂದ ತಲಾ 50 ಸಾವಿರ ರೂ ಕೈಗಡ ಸಾಲ ಪಡೆದಿದ್ದ ಹಸೀನಾ ಶೇಖ್ ಅವರು ಬಡ್ಡಿಸಹಿತ ಸಾಲ ತೀರಿಸಿದರೂ ಸಾಲ ಕೊಟ್ಟವರು ಭದ್ರತೆಗೆ ನೀಡಿದ ಖಾಲಿ ಚೆಕ್’ನ್ನು ಮರಳಿಸಿಲ್ಲ. ಚೆಕ್ ಬೌನ್ಸ ಪ್ರಕರಣ ದಾಖಲಿಸುವುದಾಗಿ ಐದು ಜನ ಬೆದರಿಸಿದ ಕಾರಣ ನ್ಯಾಯಕ್ಕಾಗಿ ಹಸೀನಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಹಳಿಯಾಳದ ಮೇದಾರಗಲ್ಲಿಯ ಹಸೀನಾ ಶೇಖ್ ಅವರು ದೇಶಪಾಂಡೆನಗರದ ಅಬ್ದುಲ್, ಫಿಶ್ ಮಾರ್ಕೇಟಿನ ಶಾಂತಾ ನಾಯ್ಕ, ಮೇದಾರಗಲ್ಲಿಯ ರಾಜು ಅಂಗಡಿ ಹಾಗೂ ತುಳಜಾ ಭವಾನಿ ದೇಗುಲ ಬಳಿಯ ಸುಭಾನಿ ಖಾನ್ ಬಳಿ ಸಾಲ ಪಡೆದಿದ್ದರು. ಇದಕ್ಕಾಗಿ ಕೆನರಾ ಬ್ಯಾಂಕಿನ ಖಾಲಿ ಚೆಕ್ ನೀಡಿದ್ದರು. ಸಮಯಕ್ಕೆ ಸರಿಯಾಗಿ ಅವರು ಸಾಲ ಮರುಪಾವತಿ ಮಾಡಿದ್ದರು.
ಆದರೆ, ಸಾಲ ಕೊಟ್ಟವರು ಚೆಕ್ ಮರಳಿಸಲು ಒಪ್ಪಿರಲಿಲ್ಲ. ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದೇ ಇದ್ದರೆ ಚೆಕ್ ಬೌನ್ಸ್ ಕೇಸ್ ದಾಖಲಿಸುವುದಾಗಿ ಬೆಳಗಾವಿಯ ಭಾಷಾ ಸನಧಿ ಹೇಳಿ ಕಳುಹಿಸಿದ್ದರು. ಅದಲ್ಲದೇ ಫೆ 4ರಂದು ಹಸಿನಾ ಅವರ ಮನೆಗೆ ನುಗ್ಗಿದ ಅಬ್ದುಲ್ ಈ ಬಗ್ಗೆ ಬೆದರಿಕೆ ಒಡ್ಡಿದ್ದರು. ಈ ಹಿನ್ನಲೆ ಹಸೀನಾ ಅವರು ಇದೀಗ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.