ಬೆಲೆ ಬಾಳುವ ವಸ್ತು ಹಾಗೂ ಆಭರಣ ಧರಿಸಿ ಪ್ರದರ್ಶಿಸದಂತೆ ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದರೂ ಜನ ಜಾಗೃತರಾಗಿಲ್ಲ. ದೇವರ ದರ್ಶನದ ವೇಳೆ ಮೈಮೇಲಿದ್ದ ಚಿನ್ನ ಕಳೆದುಕೊಂಡ ಭೂಪತಿ `ಬೇರೆ ಯಾರೋ ಕದ್ದಿರಬಹುದು’ ಎಂಬ ಅನುಮಾನದ ಮೇರೆಗೆ ಇದೀಗ ಪೊಲೀಸ್ ದೂರು ನೀಡಿದ್ದಾರೆ.
ಆಂದ್ರಪ್ರದೇಶದ ಭೂಪತಿ ರಾವ್ ಕಾರವಾರದ ಹಬ್ಬುವಾಡ ರಾಘವೇಂದ್ರ ಮಠದ ಬಳಿ ವಾಸವಾಗಿದ್ದಾರೆ. ಫೆ 8ರಂದು ಅವರು ತಮ್ಮ ಬಳಿಯಿದ್ದ 1.60 ಲಕ್ಷ ರೂ ಮೌಲ್ಯದ ಬ್ರೇಸ್‌ಲೈಟನ್ನು ಬಲಗೈಗೆ ಧರಿಸಿಕೊಂಡಿದ್ದರು. ಅದಾದ ನಂತರ ಹೆಂಡತಿ-ಮಕ್ಕಳ ಜೊತೆ ಗೋಕರ್ಣಕ್ಕೆ ತೆರಳಿದ್ದರು.
ಅಲ್ಲಿ-ಇಲ್ಲಿ ಸುತ್ತಾಟದ ನಂತರ ಅವರು ದೇವರ ದರ್ಶನಕ್ಕೆ ಬಂದಿದ್ದರು. ನಂದಿ ಮಂಟಪದ ಬಳಿ ನಿಂತಿರುವಾಗ ಅವರ ಕೈಯಲ್ಲಿದ್ದ ಬ್ರೇಸ್ ಲೈಟ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ದೇವರ ಮೇಲಿದ್ದ ಭಕ್ತಿ ಬ್ರೇಸ್ ಲೈಟ್ ಕಡೆ ತಿರುಗಿದ್ದು, ಅಲ್ಲಿ ಅವರು ಅದರ ಹುಡುಕಾಟ ನಡೆಸಿದ್ದಾರೆ. ಆದರೆ, ಬ್ರೇಸ್ ಲೈಟ್ ಮಾತ್ರ ಸಿಕ್ಕಿಲ್ಲ. ಹೀಗಾಗಿ ಅಕ್ಕ-ಪಕ್ಕದಲ್ಲಿರುವ ಭಕ್ತರನ್ನು ಅವರು ಒಮ್ಮೆ ಅನುಮಾನದಿಂದ ನೋಡಿದರು.
`20 ಗ್ರಾಂ ತೂಕದ ಬ್ರೇಸ್ ಲೈಟನ್ನು ಯಾರೋ ಅಪಹರಿಸಿದ್ದಾರೆ’ ಎಂದು ಅವರು ಮೊದಲು ಹೇಳಿದರು. ನಂತರ `ಎಲ್ಲಿಯೋ ಬಿದ್ದಿರಬಹುದು’ ಎಂದು ಸಮಾಧಾನಿಸಿಕೊಂಡರು. ಕೊನೆಗೆ ಈ ಎರಡು ಅನುಮಾನದ ಹಿನ್ನಲೆ `ಬ್ರೇಸ್ ಲೈಟ್ ಹುಡುಕಿಕೊಡಿ’ ಎಂದು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು.