4.80 ಲಕ್ಷ ರೂ ಸಾಲ ಪಡೆದಿದ್ದ ಸುಲಕ್ಷಾ ಗಜೀಕರ್ 6.65ಲಕ್ಷ ರೂ ಮರುಪಾವತಿ ಮಾಡಿದ್ದಾರೆ. ಅದಾಗಿಯೂ 1.47 ಲಕ್ಷ ರೂ ಪಾವತಿಸುವಂತೆ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ಸಿಬ್ಬಂದಿ ಪೀಡಿಸುತ್ತಿದ್ದು, ಹಣ ಪಾವತಿಗೆ ಕಾಲಾವಕಾಶವನ್ನು ನೀಡುತ್ತಿಲ್ಲ.
ಕಾರವಾರದ ಕೋಡಿಭಾಗದಲ್ಲಿರುವ ಸೆಂಟ್ ಮಿಲಾಗ್ರೀಸ್ ಶಾಖೆಯಲ್ಲಿ ಸದಾಶಿವಗಡ ತಾರಿವಾಡದ ಸುಲಕ್ಷಾ ಗಜೀಕರ್ ಅವರು 2018ರಲ್ಲಿ 4.80 ಲಕ್ಷ ರೂ ಸಾಲ ಪಡೆದಿದ್ದರು. ಅದಕ್ಕೆ ಪ್ರತಿಯಾಗಿ ಅವರು ಬಡ್ಡಿಯನ್ನು ಪಾವತಿಸುತ್ತಿದ್ದು, ಈವರೆಗೆ 665914ರೂ ಪಾವತಿ ಮಾಡಿದ್ದರು. ಇನ್ನೂ 147141ರೂ ಪಾವತಿ ಮಾಡುವಂತೆ ಬ್ಯಾಂಕಿನವರು ಸೂಚಿಸಿದ್ದು, ಅದಕ್ಕೆ ಸುಲಕ್ಷಾ ಅವರು ಕೊಂಚ ಸಮಯಾವಕಾಶ ಕೋರಿದ್ದರು.
ಅದಾಗಿಯೂ, ಫೆ 7ರಂದು ಬ್ಯಾಂಕಿನ ಐದು ಜನ ಸಾಲ ಪಡೆಯುವಾಗ ಜಾಮೀನು ನೀಡಿದ್ದ ಸದಾಶಿವಗಡ ಕಾಜುವಾಡದಲ್ಲಿರುವ ಅಶೋಕ ರೇವಣಕರ ಅವರ ಮನೆ ಬಾಗಿಲು ಬಡಿದಿದ್ದರು. ಬುಲೋರೋ ಜೀಪನ್ನು ಮನೆ ಮುಂದೆ ತಂದು ಜಾಮೀನುದಾರರ ಮಾನ ಕಳೆಯುವ ಪ್ರಯತ್ನ ನಡೆಸಿದ್ದರು. ಈ ವೇಳೆ ಅಲ್ಲಿಗೆ ಬಂದ ಸುಲಕ್ಷಾ ಅವರನ್ನು ಬ್ಯಾಂಕ್ ಸಿಬ್ಬಂದಿ ಬೆದರಿಸಿದರು. ‘ಹಣ ಕೊಡುವವರೆಗೂ ಮನೆ ಬಿಟ್ಟು ಹೋಗುವುದಿಲ್ಲ’ ಎಂದು ಪಟ್ಟು ಹಿಡಿದಿದರು.
ನಿಯಮಾವಳಿಗಳನ್ನು ಗಾಳಿಗೆ ತೂರಿ ಬೆದರಿಸಿದ ಬ್ಯಾಂಕ್ ವರ್ತನೆ ವಿರುದ್ಧ ಸಂತ್ರಸ್ತ ಸಾಲಗಾರ್ತಿ ಸುಲಕ್ಷಾ ಗಜೀಕರ್ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಚಿತ್ತಾಕುಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪುಲನ್ ಡಿ ಕಲ್ಗುಟ್ಕರ್ ಅವರು ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.