ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ನಿರ್ದೇಶಕಿ ಸಹನಾ ಭಟ್ಟ ಅವರು ಹೊನ್ನಾವರದ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ನೃತ್ಯ ಪ್ರದರ್ಶನ ನೀಡಿದ್ದು, ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಹುರಿದುಂಬಿಸಿದರು. ಈ ವೇದಿಕೆಯಲ್ಲಿ ಸಹನಾ ಭಟ್ಟ ಅವರ ಶಿಷ್ಯೆ ವಿನುತಾ ಹೆಗಡೆ ಹಾಗೂ ಕಲಾಕೇಂದ್ರದ ವಿದ್ಯಾರ್ಥಿಗಳು ಸಹ ವಿವಿಧ ನೃತ್ಯ ರೂಪಕಗಳನ್ನು ಪ್ರದರ್ಶಿಸಿದರು.
ಸಹನಾ ಭಟ್ ಅವರು ಮಹಾಭಾರತದ ಕರ್ಣನ ವ್ಯಕ್ತಿತ್ವವನ್ನು ನೃತ್ಯದ ಮೂಲಕ ಪರಿಚಯಿಸಿದರು. ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಪುಷ್ಪಾಂಜಲಿ, ಅಲರಿಪು, ಜತಿಸ್ವರ, ದೇವರನಾಮ, ಕೌತುಕಂ, ವರ್ಣಂ ಮೊದಲಾದ ನೃತ್ಯಗಳನ್ನು ಪ್ರದರ್ಶಿಸಿದರು. ಹೊನ್ನಾವರ ನಾಟ್ಯಾಂಜಲಿಯ ನೃತ್ಯ ಗುರು ವಿನುತಾ ಹೆಗಡೆಯವರ ನೇತೃತ್ವದಲ್ಲಿ ಪ್ರದರ್ಶನಗೊಂಡ ದುರ್ಗಾಸ್ತುತಿ ಜನ ಮೆಚ್ಚುಗೆಗಳಿಸಿತು.
ಫೆ 8ರಂದು ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದಿoದ `ಕಿಂಕಿಣಿ ನಾಧ’ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಹಿತಿ ಡಾ ಶ್ರೀಪಾದ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. `ನಾಟ್ಯ ಎನ್ನುವುದು ಎಲ್ಲದನ್ನೂ ಮುದಗೊಳಿಸುವಂಥಹುದು. ನಾಟ್ಯಕ್ಕೆ ತನ್ನದೇ ಆದ ಪರಿಮಳ-ಸ್ವಾದಗಳಿವೆ. ಕಿಂಕಿಣಿ ನಾದ ಕಾರ್ಯಕ್ರಮ ಒಂದು ನೃತ್ಯ ಕಾಶಿಯಂತೆ ಭಾಸವಾಗುತ್ತಿದೆ’ ಎಂದವರು ಅಭಿಪ್ರಾಯಪಟ್ಟರು. ವಿಶ್ರಾಂತ ಪ್ರಾಚಾರ್ಯ ಎಸ್ ಜಿ ಭಟ್ಟ ಕಬ್ಬಿನಗದ್ದೆ ಮಾತನಾಡಿ `ಮಕ್ಕಳು ನರ್ತಿಸುವಾಗ ದೇವಲೋಕವೇ ಧರೆಗಿಳಿದ ರೀತಿ ಭಾಸವಾಯಿತು’ ಎಂದರು.

ಭರತನಾಟ್ಯ ಕಲಾವಿದೆ ವಿನುತಾ ಹೆಗಡೆ ಹಾಗೂ ರಾಘವೇಂದ್ರ ಹೆಗಡೆ ದಂಪತಿಯನ್ನು ಇದೇ ವೇದಿಕೆಯಲ್ಲಿ ಗೌರವಿಸಲಾಯಿತು
ವೈದ್ಯೆ ಡಾ ರೇಖಾ ಕಿಣಿ ಮಾತನಾಡಿ `ಮಕ್ಕಳ ಮಾನಸಿಕ, ಬೌದ್ಧಿಕ, ದೈಹಿಕ ಆರೋಗ್ಯ ವೃದ್ಧಿಗೆ ಭರತನಾಟ್ಯ ಸಹಕಾರಿ’ ಎಂದರು. ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ನಿರ್ದೇಶಕಿ ಸಹನಾ ಭಟ್ಟ ಮಾತನಾಡಿ `ನೃತ್ಯವನ್ನು ಪ್ರತಿಯೊಬ್ಬರು ಆರಾಧಿಸುವುದನ್ನು ಕಲಿಯಬೇಕು. ಆಗ ಮಾತ್ರ ಅದು ನಮ್ಮ ಜೀವನದಲ್ಲಿ ಆನಂದ ಕೊಡುತ್ತದೆ’ ಎಂದರು. ಹೊನ್ನಾವರ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಗುರು ವಿನುತಾ ಹೆಗಡೆ ಮಾತನಾಡಿ `ಮಕ್ಕಳಿಗೆ ನೃತ್ಯ ಅಭ್ಯಾಸ ಮಾಡಿಸುವಲ್ಲಿ ಪಾಲಕರ ಶ್ರಮ ಸಹ ಅಪಾರ’ ಎಂದರು.
ಯಕ್ಷ ಕಲಾವಿದ ಪಿ ಡಿ ಭಟ್ಟ ಕಾರ್ಯಕ್ರಮದಲ್ಲಿದ್ದರು. ಸಹನಾ ಭಟ್ಟ ಹಾಗೂ ವಿನುತಾ ಹೆಗಡೆ ಅವರಿಗೆ ವಿದ್ಯಾರ್ಥಿಗಳು ಗುರು ವಂದನೆ ಸಲ್ಲಿಸಿದರು. ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ್ ಭಟ್ ಅವರು ಅಧ್ಯತೆವಹಿಸಿದ್ದರು. ಶಿಕ್ಷಕ ರಾಘವೇಂದ್ರ ಎಸ್ ಹೆಗಡೆ ಸ್ವಾಗತಿಸಿ, ನಿರ್ವಹಿಸಿದರು.