ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಅಂಕೋಲಾದ ಕೇಣಿಯಲ್ಲಿ ಸೋಮವಾರ ಸಾವಿರಾರು ಜನ ಪ್ರತಿಭಟನೆ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ ಹಾಗೂ ಅಂಕೋಲಾ ಪುರಸಭೆಯ ಕೇಣಿ ಗ್ರಾಮದಲ್ಲಿ `ಗ್ರೀನ್ ಪಿಲ್ಡ್’ ಬಂದರು ನಿರ್ಮಿಸಲು ಸರ್ಕಾರ ಮುಂದಾಗಿದೆ. ಖಾಸಗಿ ಕಂಪನಿಗೆ ವಾಣಿಜ್ಯ ಬಂದರು ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ. ಈ ಹಿನ್ನಲೆ ಫೆ 24ರಂದು ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದರು. ಬಂದರು ನಿರ್ಮಾಣ ಕಾಮಗಾರಿಗೆ ಅಡ್ಡಿ ಆಗದಂತೆ ಅವರು ಈ ಮುನ್ನಚ್ಚರಿಕೆವಹಿಸಿದ್ದರು
ಆದರೆ, `ವಾಣಿಜ್ಯ ಬಂದರುವಿನಿ0ದ ತಮ್ಮ ಬದುಕಿನ ಹಕ್ಕು ಕಿತ್ತುಕೊಳ್ಳಲಾಗುತ್ತಿದೆ’ ಎಂದು ಈ ದಿನ ಮೀನುಗಾರರು ಅಳಲು ತೋಡಿಕೊಂಡರು. `ಮೀನುಗಾರಿಕೆಯನ್ನು ನಂಬಿ ಬದುಕುತ್ತಿರುವವರು ಬಂದರು ನಿರ್ಮಾಣದ ನಂತರ ಅತಂತ್ರರಾಗಲಿದ್ದಾರೆ’ ಎಂದು ಹೇಳಿದರು. ಬಿಗಿ ಪೊಲೀಸ್ ಭದ್ರತೆಯನ್ನು ಮೀರಿ ನಿಷೇಧಿತ ಪ್ರದೇಶಕ್ಕೆ ಬಂದು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಸೇರಿ ವಿವಿಧ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಮೊಳಗಿಸಿದರು. ಜೊತೆಗೆ ಮಹಿಳೆಯರು, ಮಕ್ಕಳು ಸೇರಿ ಅನೇಕರು ಸಮುದ್ರಕ್ಕೆ ಹಾರಿ ಆಕ್ರೋಶ ವ್ಯಕ್ತಪಡಿಸಿದರು.
ಮೂವರು ಮಹಿಳೆಯರು ಅಸ್ವಸ್ಥ:
ಬಂದರು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮೂವರು ಮಹಿಳೆಯರು ಅಸ್ವಸ್ಥರಾದರು. ಸಮುದ್ರಕ್ಕೆ ಇಳಿದು ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮಹಿಳೆಯರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.