ಉತ್ತರ ಕನ್ನಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರ ಮನೆ ಮುಂದೆ ಸೋಮವಾರ ರೈತ ಹಾಗೂ ಕೃಷಿ ಕೂಲಿಕಾರರ ಸಂಘದವರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮೂಲಕ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
`ಸಾಗುವಳಿ ಹಾಗೂ ವಸತಿಗಾಗಿ ಅರಣ್ಯ ಭೂಮಿ ಅವಲಂಬಿಸಿರುವ ರೈತರು ಮತ್ತು ಕೂಲಿಕಾರರ ಕುಟುಂಬದವರು ಅರಣ್ಯ ಕಾಯ್ದೆ 2006ರಂತೆ ಅರಣ್ಯ ಹಕ್ಕು ಸಮಿತಿಗೆ ಅರ್ಜಿ ಸಲ್ಲಿಸಿ 15 ವರ್ಷ ಕಳೆದಿದೆ. ಆದರೆ, ಇಷ್ಟು ವರ್ಷ ಕಳೆದರೂ ಅರಣ್ಯ ಹಕ್ಕು ಪತ್ರ ಸಿಕ್ಕಿಲ್ಲ. ಪರಿಶೀಲನೆ ಹೆಸರಿನಲ್ಲಿ ಮೂರು ತಲೆಮಾರಿನ ಹಿಂದಿನ ದಾಖಲೆ ಕೇಳಿ ತೊಂದರೆ ನೀಡಲಾಗುತ್ತಿದೆ’ ಎಂದು ಸಂಘಟನೆ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ವಿವರಿಸಿದರು. `ಮುಂದಿನ ಅಧಿವೇಶನದಲ್ಲಿ ಅರಣ್ಯ ಸಾಗುವಳಿಕಾರರ ಬೇಡಿಕೆಗಳ ಈಡೇರಿಸುವ ಬಗ್ಗೆ ಪ್ರಯತ್ನಿಸಬೇಕು’ ಎಂದು ಜಿಲ್ಲಾ ಸಮಿತಿಯ ಶ್ಯಾಮನಾಥ ನಾಯ್ಕ, ಗೌರೀಶ ನಾಯಕ, ಸಂತೋಷ ನಾಯ್ಕ, ರಮಾನಂದ ನಾಯಕ ಅಚವೆ ಒತ್ತಾಯಿಸಿದರು. ಪ್ರಮುಖರಾದ ಉಲ್ಲಾಸ ನಾಯ್ಕ, ಉಲ್ಲಾಸ ತಳ್ಳೇಕರ್, ಪ್ರೇಮಾ ಉಳಗೇಕರ್ ಹಾಗೂ ಮಾದೇವ ಗೌಡ ಈ ವೇಳೆ ಹಾಜರಿದ್ದರು.

ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಅವರನ್ನು ಸಹ ಜೊಯಿಡಾದ ರೈತರು ಭೇಟಿ ಮಾಡಿ ಮನವಿ ಸಲ್ಲಿಸಿದರು. `ಜನಪ್ರತಿನಿಧಿಗಳಿಲ್ಲದ ಸಮಿತಿಯಿಂದ ನಡೆಯುವ ಅರ್ಜಿ ಪರಿಶೀಲನೆ ತಡೆಯಬೇಕು. ಈಗಿರುವ ಕಾಯ್ದೆಯ ಅಡಿ ಹಕ್ಕು ಪತ್ರ ವಿತರಿಸಬೇಕು. ಗ್ರಾಮ ಅರಣ್ಯ ಹಕ್ಕು ಸಮಿತಿ ಅಂಗೀಕರಿಸಿರುವ ಎಲ್ಲ ಅರ್ಜಿಗಳಿಗೂ ಮಾನ್ಯತೆ ನೀಡಿ ಹಕ್ಕುಪತ್ರ ನೀಡಬೇಕು’ ಎಂದು ಒತ್ತಾಯಿಸಿದರು. `ಅರಣ್ಯ ಇಲಾಖೆಯ ಸಿಬ್ಬಂದಿಯಿoದ ಅರಣ್ಯವಾಸಿಗಳಿಗೆ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು. ಅತಿಕ್ರಮಣ ಭೂಮಿಯಲ್ಲಿ ಮನೆ ನಿರ್ಮಾಣ, ದುರಸ್ಥಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಡ್ಡಿ ಮಾಡಬಾರದು’ ಎಂದು ಒತ್ತಾಯಿಸಿದರು. ಸಂಘಟನೆ ತಾಲೂಕು ಅಧ್ಯಕ್ಷ ಪ್ರೇಮಾನಂದ ವೇಳಿಪ್ ನೇತ್ರತ್ವದಲ್ಲಿ ಮನವಿ ಸಲ್ಲಿಸಿದರು.

ಇನ್ನೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ರೈತ ಸಂಘದ ಪ್ರಮುಖರು ಭೇಟಿ ಮಾಡಿ ಮನವಿ ಸಲ್ಲಿಸಿದರು. `ಕೇಂದ್ರ ಮತ್ತು ರಾಜ್ಯ ಸರಕಾರಗಳು ಅರಣ್ಯ ಭೂಮಿ ಹಕ್ಕು ನೀಡಲು ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು. ಆದಿವಾಸಿ ಬುಡಕಟ್ಟು ಜನರ ಭೂಮಿ ಹಕ್ಕಿನ ಪ್ರಶ್ನೆಯನ್ನು ಕೂಡಲೇ ಇತ್ಯರ್ಥಪಡಿಸಬೇಕು’ ಎಂದು ಯಲ್ಲಾಪುರದ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕೂಲಿಕಾರರ ಸಂಘದ ಪ್ರಮುಖರಾದ ಬೀಮಣ್ಣ ಬೋವಿ, ಲಕ್ಷ್ಮೀ ಸಿದ್ದಿ, ಗೌರಿ ಮರಾಠೆ ಒತ್ತಾಯಿಸಿದರು. ಇನ್ನೂ ಹೊನ್ನಾವರದಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವ ಅವರ ಕಚೇರಿಗೆ ತೆರಳಿದ ತಿಮ್ಮಪ್ಪ ಗೌಡ, ತಿಲಕ ಗೌಡ ಇತರರು ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.