ಸಾರ್ವಜನಿಕ ಕುಡಿಯುವ ನೀರು ಪೂರೈಕೆ ಸ್ಥಳದಲ್ಲಿ ಮಸೀದಿ ನಿರ್ಮಿಸುತ್ತಿರುವುದನ್ನು ನೂತನ ನಗರ (ಜಡ್ಡಿ)ದ ಜನ ವಿರೋಧಿಸಿದ್ದಾರೆ.
ಯಲ್ಲಾಪುರ ಪಟ್ಟಣದ ನೂತನ ನಗರದಲ್ಲಿ (ಜಡ್ಡಿ) ಹಜರತ್ ಖಾಜಾ ಗರಿಬನ್ ನವಾಜ್ ಮಸೀದಿ ಕಾಮಗಾರಿ ನಡೆಯುತ್ತಿದೆ. ಅಧಿಕೃತ ಪರವಾನಿಗೆ ಇಲ್ಲದಿದ್ದರೂ ಇಲ್ಲಿ ಮಸೀದಿ ಕೆಲಸ ನಡೆಯುತ್ತಿದೆ ಎಂಬುದು ಸ್ಥಳೀಯರ ಆರೋಪ. ಆರು ತಿಂಗಳ ಹಿಂದೆ ಕಾಮಗಾರಿ ನಡೆಸುತ್ತಿದ್ದಾಗ ಗಜಾನನ ಉತ್ಸವ ಸಮೀತಿಯವರು ಅದಕ್ಕೆ ತಡೆ ಒಡ್ಡಿದ್ದರು. ಆದರೆ, ಇದೀಗ ಸರ್ಕಾರಿ ರಜಾ ದಿನದ ಅವಧಿಯಲ್ಲಿ ಕೆಲಸ ಮುಂದುವರೆಸಲಾಗುತ್ತಿದೆ.
ಭಾನುವಾರ ಸಹ ಮಸೀದಿ ಕೆಲಸ ನಡೆದಿದ್ದು, ಇದಕ್ಕೆ ಅಲ್ಲಿನವರು ಆಕ್ಷೇಪ ವ್ಯಕ್ತಪಡಿಸಿದರು. ನೀರಿನ ಟಾಕಿ, ಟಾಕಿಗೆ ಅಗತ್ಯ ಮೆಟ್ಟಿಲು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ನಲ್ಲಿಗೆ ಮಸೀದಿ ಕಟ್ಟಡದಿಂದ ಸಮಸ್ಯೆಯಾಗಿದೆ. ಸಾರ್ವಜನಿಕರ ಓಡಾಟಕ್ಕೂ ಅನಧಿಕೃತ ಮಸೀದಿ ಕಟ್ಟಡದಿಂದ ಅಡಚಣೆಯಾಗುತ್ತಿದೆ. ಹೀಗಾಗಿ ಅನಧಿಕೃತವಾಗಿ ನಡೆಯುತ್ತಿರುವ ಮಸೀದಿ ನಿರ್ಮಾಣ ಕಾರ್ಯ ಮುಂದುವರೆಸಬಾರದು ಎಂದು ಒತ್ತಾಯಿಸಿದರು.
ಈ ಕುರಿತು ತಹಶೀಲ್ದಾರ್ ಕಚೇರಿ ಎದುರು ಹೋರಾಟಗಾರರು ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ ಹಾಗೂ ಪ ಪಂ ಮುಖ್ಯಾಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಸಿದರು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗೆ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.