ಎರಡು ವಾರದ ನಂತರ ಮುಂಡಗೋಡಿನ ಹಣ್ಣಿನ ಅಂಗಡಿಗಳ ಮೇಲೆ ಮತ್ತೆ ಕಳ್ಳರು ಕಣ್ಣಾಯಿಸಿದ್ದಾರೆ. ಟಿಬೆಟಿಯನ್ ಕಾಲೋನಿಯ ಕ್ಯಾಂಪ್ ನಂಬರ್ 1ರಲ್ಲಿಯ ಹಣ್ಣಿನ ಅಂಗಡಿಯಲ್ಲಿ ಮತ್ತೆ ಕಳ್ಳತನವಾಗಿದೆ.
ಇಲ್ಲಿ ಇಮಾಮಸಾಬ ಸೈಯದಲಿ ಇಂದೂರ ಹಾಗೂ ಭಾಷಾಸಾಬ ರಾಜೇಸಾಬ ಇಂದೂರ ಎಂಬಾತರು ಹಣ್ಣುಗಳ ವ್ಯಾಪಾರ ನಡೆಸಿ ಬದುಕು ಕಟ್ಟಿಕೊಂಡಿದ್ದರು. ಆದರೆ, ಕಳ್ಳರು ಆ ಅಂಗಡಿಗೆ ನುಗ್ಗಿ 20 ಸಾವಿರ ರೂ ಬೆಲೆಯ ಹಣ್ಣುಗಳನ್ನು ದೋಚಿದ್ದಾರೆ. ಬಾಕ್ಸಿನಸಹಿತ ಹಣ್ಣುಗಳು ಕಣ್ಮರೆಯಾಗಿದೆ.
ಎರಡು ವಾರದ ಹಿಂದೆ ಸಹ ಈ ಭಾಗದಲ್ಲಿ ಕಳ್ಳತನ ನಡೆದಿತ್ತು. ಎರಡು ಅಂಗಡಿಯಲ್ಲಿರಿಸಿದ್ದ ತಲಾ 13 ಸಾವಿರ ರೂ ಹಣವನ್ನು ಕಳ್ಳರು ಲಪಟಾಯಿಸಿದ್ದರು. ಇದೀಗ ಮತ್ತೆ ಕಳ್ಳತನ ನಡೆದಿರುವುದರಿಂದ ಜನ ಆತಂಕದಲ್ಲಿದ್ದಾರೆ. `ಕಳ್ಳರನ್ನು ಪತ್ತೆ ಮಾಡಿ, ವ್ಯಾಪಾರಿಗಳಿಗೆ ನ್ಯಾಯ ಒದಗಿಸಬೇಕು’ ಎಂದು ಇಂದೂರ ಗುತ್ತಿಗೆದಾರ ಹಜರತ್ ಅಲಿ ಅತ್ತಿಗೆರೆ ಹೇಳಿದ್ದಾರೆ.