ಸಾಕಷ್ಟು ಜನಪರ ಕೆಲಸ ಮಾಡಿದರೂ ಎಂದಿಗೂ ಮುನ್ನೆಲೆಗೆ ಬಾರದ ಯಲ್ಲಾಪುರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್ ಅವರ ಸಾಧನೆ ಗುರುತಿಸಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಗೌರವಿಸಿದೆ.
ಡಾ ನರೇಂದ್ರ ಪವಾರ್ ಅವರು ಕಳೆದ ಆರು ವರ್ಷಗಳಿಂದ ಯಲ್ಲಾಪುರ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದಾರೆ. ಜನರ ಸಮಸ್ಯೆಗಳಿಗೆ ತ್ವರೀತವಾಗಿ ಸ್ಪಂದಿಸುವುದು ಅವರ ಹುಟ್ಟು ಗುಣ. ಜೀವನಮಟ್ಟ ಸುಧಾರಣೆ, ಆರೋಗ್ಯ ಕಾಳಜಿಯ ಬಗ್ಗೆ ಅವರು ನಿರಂತರವಾಗಿ ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಧೀನ ಅಧಿಕಾರಿಗಳಿಗೂ ಸಹ ಅವರು ಕರ್ತವ್ಯ ನಿಷ್ಠೆ ಹಾಗೂ ಜನಪರ ಕೆಲಸ ಮಾಡುವ ಬಗ್ಗೆ ತಿಳಿಹೇಳಿದ್ದು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಸ್ವಚ್ಚತೆ-ಶಿಸ್ತು ಕಾಪಾಡುವಲ್ಲಿ ಡಾ ನರೇಂದ್ರ ಪವಾರ್ ಅವರ ಶ್ರಮ ಅಪಾರ.
ಇನ್ನೂ ಸಮುದಾಯದಗಳಲ್ಲಿನ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಡಾ ನರೇಂದ್ರ ಪವಾರ್ ವಿಶೇಷ ಕಾಳಜಿವಹಿಸಿದ್ದಾರೆ. ತಾಲೂಕಿನಲ್ಲಿ ನಡೆದ ವಾಂತಿ-ಬೇದಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ್ದಾರೆ. ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವಲ್ಲಿಯೂ ಅವರು ಮುಂಚೂಣಿಯಲ್ಲಿದ್ದಾರೆ. ಸದ್ಯ ವೈದ್ಯರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಪ್ರಯತ್ನ ಮಾಡುತ್ತಿರುವ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘಕ್ಕೆ ಅತಿ ಹೆಚ್ಚು ಸದಸ್ಯರನ್ನು ಸೇರಿಸಿದ ಸಾಧನೆಗಾಗಿ ಡಾ ನರೇಂದ್ರ ಪವಾರ್ ಅವರ ಕೆಲಸವನ್ನು ಸಂಘ ಮೆಚ್ಚಿದೆ. ವಿಜಯಪುರದಲ್ಲಿ ನಡೆದ 31ನೆಯ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಮ್ಮೇಳನದಲ್ಲಿ ಡಾ ನರೇಂದ್ರ ಪವಾರ್ ಅವರ ಸಾಧನೆಯನ್ನು ಗೌರವಿಸಲಾಯಿತು.
ವೈದ್ಯಾಧಿಕಾರಿಯಾಗಿ 21 ವರ್ಷ ಅನುಭವ ಹೊಂದಿರುವ ಡಾ ನರೇಂದ್ರ ಪವಾರ್ ಅವರು ಸಂಘಕ್ಕೆ ಅತಿ ಹೆಚ್ಚು ಸದಸ್ಯರನ್ನು ನೋಂದಾಯಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಗೆ `ಉತ್ತಮ ಶಾಖಾ ಪ್ರಶಸ್ತಿ’ಯನ್ನು ತಂದುಕೊಟ್ಟರು. ವೈದ್ಯಕೀಯ ಶಿಕ್ಷಣದ ಕುರಿತು ವೆಬಿನಾರ್ ಆಯೋಜನೆ, ಜಿಲ್ಲಾ ಮಟ್ಟದಲ್ಲಿ ಎರಡು ಸಮ್ಮೇಳನ ಸಂಘಟನೆ ಸೇರಿ ಡಾ ನರೇಂದ್ರ ಪವಾರ್ ಅವರ ಸೇವೆಯನ್ನು ಈ ವೇಳೆ ಸ್ಮರಿಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್, ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ಡಾ ನರೇಂದ್ರ ಪವಾರ್ ಅವರಿಗೆ ಗೌರವಿಸುವ ಮೂಲಕ `ಉತ್ತರ ಕನ್ನಡ ಜಿಲ್ಲೆಗೆ ಉತ್ತಮ ವೈದ್ಯಕೀಯ ಸಂಘ’ ಪ್ರಶಸ್ತಿ ನೀಡಿ ಗೌರವಿಸಿದರು. `ಜಿಲ್ಲಾ ವೈದ್ಯಾಧಿಕಾರಿ ಡಾ ನೀರಜ್ ಬಿವಿ, ಆರ್‌ಸಿಎಚ್ ಅಧಿಕಾರಿಗಳಾದ ಡಾ ನಟರಾಜ್ ಕೆ ಅವರ ಮಾರ್ಗದರ್ಶನದಿಂದ ಉತ್ತರ ಕನ್ನಡ ಜಿಲ್ಲಾ ಸಂಘ ಮಾದರಿಯಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ಈ ಪ್ರಶಸ್ತಿ ಬರುವಲ್ಲಿ ಜಿಲ್ಲೆಯ ವೈದ್ಯರ ಕೊಡುಗೆಯೂ ಸಾಕಷ್ಟಿದೆ’ ಎಂದು ಡಾ ನರೇಂದ್ರ ಪವಾರ್ ಪ್ರತಿಕ್ರಿಯಿಸಿದರು.




