ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶಿವಕ್ಷೇತ್ರ ಕವಳಾ ಗುಹೆ. ಜೊಯಿಡಾ ತಾಲೂಕಿನ ಪ್ರಧಾನಿ ಗ್ರಾ ಪಂ ವ್ಯಾಪ್ತಿಯಲ್ಲಿ ಈ ಐತಿಹಾಸಿಕ ದೇಗುಲವಿದೆ. ಮಹಾಶಿವರಾತ್ರಿಗೆ ಸಾವಿರಾರು ಭಕ್ತರು ಬರುತ್ತಿದ್ದು, `ಈ ಬಾರಿ ಎಲ್ಲರೂ ಪಣಸೋಲಿ ಮಾರ್ಗವನ್ನು ಮಾತ್ರ ಬಳಸಿ’ ಎಂದು ಕವಳೇಶ್ವರ ದೇವಸ್ಥಾನ ಸಮಿತಿಯವರು ಮನವಿ ಮಾಡಿದ್ದಾರೆ.
ಕಾಡಿನ ಮಧ್ಯದಿಂದ ೧೦ಕಿಮೀ ಸಾಗಿದ ನಂತರ ಕವಳೇಶ್ವರನ ಗುಹೆ ಸಿಗುತ್ತದೆ. ಶಿವರಾತ್ರಿಯಂದು ಮಾತ್ರ ಇಲ್ಲಿ ದೇವರ ದರ್ಶನ ಸಾಧ್ಯವಿದೆ. ಹೀಗಾಗಿ ಮಧ್ಯರಾತ್ರಿಯಿಂದಲೇ ಜನ ಬರುತ್ತಾರೆ. ಈ ಬಾರಿ ಹೆಚ್ಚಿನ ಜನರು ಬರುವ ಸಾಧ್ಯತೆ ಇದ್ದು ಜನರು ಪಣಸೋಲಿ ಮೂಲಕವೇ ಬರುವುದು ಸೂಕ್ತ ಎಂಬುದು ಅಲ್ಲಿನವರ ಅಭಿಪ್ರಾಯವಾಗಿದೆ.
ಈಚೆಗೆ ಕವಳಾ ಗುಹೆಗೆ ಸಾಕಷ್ಟು ಪ್ರಚಾರ ಸಿಕ್ಕಿದೆ. ಹೀಗಾಗಿ ಬಹುಬೇಗ ಈ ಕ್ಷೇತ್ರ ಪ್ರಸಿದ್ಧಿಯನ್ನು ಪಡೆದಿದೆ. ಈ ದೇಗುಲಕ್ಕೆ ತೆರಳಲು ಎರಡು ಮಾರ್ಗಗಳಿವೆ. ಆದರೆ, ಒಂದು ಮಾರ್ಗ ಸಂಪೂರ್ಣವಾಗಿ ಹಾಳಾಗಿದೆ. ಈ ಹಿನ್ನಲೆ ಪಣಸೋಲಿ ಮಾರ್ಗವಾಗಿ ಬರುವಂತೆ ದೇಗುಲ ಸಮಿತಿಯವರು ಭಕ್ತರಿಗೆ ಕರೆ ನೀಡಿದ್ದಾರೆ.
ಅಂಬಿಕಾನಗರ ಮೂಲಕ ಮೆಟ್ಟಿಲುಗಳನ್ನು ಏರಿ ಗುಹೆಗೆ ತೆರಳಲು ಒಂದು ದಾರಿಯಿದೆ. ಆದರೆ, ಅಲ್ಲಿನ ಮೆಟ್ಟಿಲುಗಳು ಮೊದಲಿನ ಹಾಗಿಲ್ಲ. ಮೆಟ್ಟಿಲು ಒಡೆದ ಕಾರಣ ಹೆಚ್ಚಿನ ಜನ ಆಗಮಿಸಿದರೆ ಅಪಾಯದ ಸಾಧ್ಯತೆ ಹೆಚ್ಚಿದೆ. ಸದ್ಯ ಪಣಸೋಲಿ ಮಣ್ಣಿನ ದಾರಿ ಓಡಾಟಕ್ಕೆ ಯೋಗ್ಯವಿದ್ದು, ಆ ದಾರಿಯನ್ನು ಬಳಸುವಂತೆ ಕೋರಲಾಗಿದೆ.