ತಲೆ ನೋವು, ಸೊಂಟ ನೋವು, ವಿಪರೀತ ಜ್ವರದ ಜೊತೆ ನಿಶಕ್ತಿಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಶಿರಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಮಂಗನ ಕಾಯಿಲೆಯ ಲಕ್ಷಣ ಗೋಚರಿಸಿದೆ.
ಶಿವಮೊಗ್ಗ ಜಿಲ್ಲೆಯ ಸೊರಬದ ಕ್ಯಾಸನೂರು ಬಳಿ 1956ರಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆಗೆ ಈವರೆಗೂ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಮಂಗನ ಕಾಯಿಲೆ ಬಾರದಂತೆ ಎಚ್ಚರವಹಿಸುವಂತೆ ಆರೋಗ್ಯಾಧಿಕಾರಿಗಳು ಜನ ಜಾಗೃತಿ ನಡೆಸುತ್ತಲೇ ಬಂದಿದ್ದಾರೆ. ಅದಾಗಿಯೂ ಮಂಗನ ಕಾಯಿಲೆ ಪ್ರಸರಿಸುತ್ತಿದ್ದು, ಸಿದ್ದಾಪುರ ತಾಲೂಕಿನಲ್ಲಿ ಹೆಚ್ಚಿಗೆ ವರದಿಯಾಗುತ್ತಿದ್ದ ಈ ರೋಗ ಇದೀಗ ಶಿರಸಿಗೂ ವ್ಯಾಪಿಸಿದೆ.
ಸದ್ಯ 51 ವರ್ಷದ ವ್ಯಕ್ತಿಯಲ್ಲಿ ಮಂಗನ ಕಾಯಿಲೆ ಕಾಣಿಸಿದೆ. ಈ ವರ್ಷದ ಮೊದಲ ಮಂಗನ ಕಾಯಿಲೆ ಪ್ರಕರಣ ಎಂದು ಅದನ್ನು ಗುರುತಿಸಲಾಗಿದೆ. ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಯ ಆರೈಕೆ ಕೆಲಸ ಮುಂದುವರೆದಿದೆ. ತಾಲೂಕಾ ಆರೋಗ್ಯ ಇಲಾಖೆಯವರು ಗ್ರಾಮೀಣ ಭಾಗಗಳಿಗೆ ತೆರಳಿ ಇನ್ನಷ್ಟು ಅರಿವು ಮೂಡಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ.
ಪ್ಲಾವಿ ವೈರಸ್ ಎಂಬ ವೈರಾಣು ಹೊಂದಿದ ಉಣ್ಣೆಗಳು ಕಚ್ಚುವುದರಿಂದ ಈ ರೋಗ ಮನುಷ್ಯನಿಗೆ ಬರುತ್ತದೆ. ಹೀಗಾಗಿ ಉಣ್ಣೆ ಕಚ್ಚಿಸಿಕೊಳ್ಳುವುದರಿಂದ ರಕ್ಷಣೆ ಪಡೆಯುವುದು ಉತ್ತಮ. `ಕಾಡಿಗೆ ಹೋಗುವ ಮುನ್ನ ಡೇಪೋ ತೈಲವನ್ನು ಕೈ-ಕಾಲುಗಳಿಗೆ ಲೇಪಿಸಿಕೊಳ್ಳಬೇಕು. ಮೈ ತುಂಬ ಬಟ್ಟೆ ಧರಿಸಿ ಸಂಚರಿಸಬೇಕು. ಕಾಡಿನಿಂದ ಮರಳಿದ ನಂತರ ಸೋಪು ಬಳಸಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಬಟ್ಟೆಗಳನ್ನು ಸಹ ಬಿಸಿ ನೀರಿನಿಂದ ತೊಳೆಯಬೇಕು. ಮನೆ ಸುತ್ತಲಿನ ಪ್ರದೇಶ ಸ್ವಚ್ಛವಾಗಿರಿಸಿಕೊಳ್ಳಬೇಕು’ ಎಂದು ವೈದ್ಯರು ಕರೆ ನೀಡಿದ್ದಾರೆ.