ಬೈಂದೂರಿನಿoದ ಬೆಟ್ಟಕೊಪ್ಪಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಸುಕುಮಾರ ನಾಯ್ಕ ಕಾಣೆಯಾಗಿದ್ದಾರೆ. ಸುಕುಮಾರ ನಾಯ್ಕರನ್ನು ಅವರನ್ನು ಹುಡುಕಿಕೊಡಿ ಎಂದು ಅವರ ತಂದೆ ಸಂಜೀವ ನಾಯ್ಕ ಪೊಲೀಸರ ಮೊರೆ ಹೋಗಿದ್ದಾರೆ.
ಬೈಂದೂರಿನ ಸುಕುಮಾರ ನಾಯ್ಕ ನಾಲ್ಕು ತಿಂಗಳ ಹಿಂದೆ ಅದೇ ಊರಿನ ತೇಜಾ ಶೆಟ್ಟಿ ಜೊತೆ ಶಿರಸಿಗೆ ಬಂದಿದ್ದರು. ಯಡಳ್ಳಿ, ಬೆಟ್ಟಕೊಪ್ಪ, ಕಲಕೈ ಗ್ರಾಮದಲ್ಲಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಜನವರಿ ತಿಂಗಳಿನಲ್ಲಿ ಜಾತ್ರೆಯಿರುವ ಕಾರಣ ಊರಿಗೆ ಮರಳಿದ್ದರು. ಆ ವೇಳೆಯಲ್ಲಿಯೇ ಸುಕುಮಾರ ನಾಯ್ಕರನ್ನು ಕುಟುಂಬದವರು ಕೊನೆಯದಾಗಿ ನೋಡಿದ್ದು, ಜಾತ್ರೆ ಮುಗಿದ ನಂತರ ಸುಕುಮಾರ್ ಮತ್ತೆ ಕೆಲಸಕ್ಕಾಗಿ ಶಿರಸಿಗೆ ಬಂದಿದ್ದರು.
ಫೆ 16ರಂದು ಕಲಕೈಯಲ್ಲಿ ಉಳಿದಿದ್ದ ಸುಕುಮಾರ ನಾಯ್ಕ ಕಾನಗೋಡಿಗೆ ಹೋಗಿ ಬರುವುದಾಗಿ ಹೇಳಿದ್ದರು. ಸಂಜೆ 7.30ಕ್ಕೆ ಅವರು ಅಲ್ಲಿಂದ ಹೊರಟಿದ್ದರು. ಆದರೆ, ಕಾನಗೋಡಿಗೆ ತಲುಪಲಿಲ್ಲ. ಮರಳಿ ಊರು ಸೇರಲಿಲ್ಲ. 38 ವರ್ಷದ ಸುಕುಮಾರ ನಾಯ್ಕ ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಅವರ ಸುಳಿವು ಸಿಗಲಿಲ್ಲ.
ಹೀಗಾಗಿ ಇದೀಗ ಅವರ ತಂದೆ ಸಂಜೀವ ನಾಯ್ಕ ಶಿರಸಿಗೆ ಬಂದಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.