ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಹಣ ಸಂಪಾದಿಸುವ ಆಸೆಗೆ ಬಿದ್ದ ಕಾರವಾರದ ಅಮೀತ ಕೋಳಂಬಕರ್ ಹಾಗೂ ಹೊನ್ನಾವರದ ಗಣಪತಿ ಹೆಗಡೆ ಮೋಸದ ಜಾಲದೊಳಗೆ ಬಿದ್ದು ಇದ್ದ ಹಣವನ್ನು ಕಳೆದುಕೊಂಡಿದ್ದಾರೆ.
ಕಾರವಾರದ ಕಡವಾಡ ಮಾರುತಿ ದೇವಸ್ಥಾನ ಅಮೀತ ಕೋಳಂಬಕರ್ ಖಾಸಗಿ ನೌಕರರಾಗಿದ್ದಾರೆ. ಫೆ 12ರಂದು ಟೆಲಿಗ್ರಾಂ ಮೂಲಕ ಆನ್‌ಲೈನ್ ಟ್ರೇಡಿಂಗ್ ಮಾಹಿತಿಪಡೆದ ಅವರು `ಟಾಟಾ ಪ್ರೊಜೆಕ್ಟ್’ ಎಂಬ ಆಫ್’ನ್ನು ಮೊಬೈಲ್’ನಲ್ಲಿ ಡೌನ್‌ಲೋಡ್ ಮಾಡಿದ್ದರು. ಅಲ್ಲಿನವರು ನೀಡಿದ ಮಾಹಿತಿಯಂತೆ ಫೆ 14ರ ಒಳಗೆ 839408ರೂ ಹೂಡಿಕೆ ಮಾಡಿದ್ದರು. ಅದಾದ ನಂತರ ಅವರನ್ನು ಆಪ್ ಹಾಗೂ ಟೆಲಿಗ್ರಾಂ ಗ್ರೂಪಿನಿಂದ ಬ್ಲಾಕ್ ಮಾಡಿ, ಹಣ ವಂಚಿಸಲಾಗಿದೆ. ಹೆಚ್ಚಿನ ಹಣ ಸಿಗುವ ಆಸೆಗೆ ಬಿದ್ದ ಅವರು ಉಳಿತಾಯದ ಹಣವನ್ನು ಕಳೆದುಕೊಂಡು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅದರಂತೆ ಹೊನ್ನಾವರದ ನಿವೃತ್ತ ಬ್ಯಾಂಕ್ ನೌಕರ ಗಣಪತಿ ಹೆಗಡೆ ಅವರಿಗೂ ಅನ್ಯಾಯವಾಗಿದೆ. ಗುಣವಂತೆಯ ಕೆರೆಮನೆ ಗಣಪತಿ ಹೆಗಡೆ ಅವರಿಗೆ ಮನೋಜ ಜೋಶಿ ಎಂಬಾತ ವಾಟ್ಸಪ್ ಮೂಲಕ ಪರಿಚಯ ಮಾಡಿಕೊಂಡಿದ್ದು, ತನ್ನನ್ನು ಶೇರ್‌ಖಾನ್ ಎಂಬ ಕಂಪನಿ ಉದ್ಯೋಗಿ ಎಂದು ನಂಬಿಸಿದ್ದಾನೆ. ಅದಾದ ನಂತರ `ಫೈನಾನ್ಸಿಶಯಲ್ ಎಲೆಕ್ಷನ್ ಸ್ಪರ್ಧೆ’ಯಲ್ಲಿ ಮತ ಹಾಕುವಂತೆ ಫುಸಲಾಯಿಸಿ ಅವರನ್ನು ಶೇರ್‌ಖಾನ್ ವಿಐಪಿ ಗ್ರೂಪ್ ಎಂಬ ವಾಟ್ಸಪ್ ಗುಂಪಿಗೆ ಆಮಂತ್ರಿಸಿದ್ದಾನೆ.
ಅಲ್ಲಿದ್ದವರು ಹಣ ಹೂಡಿಕೆ ಮಾಡುವಂತೆ ಒತ್ತಾಯ ಮಾಡಿದ್ದರಿಂದ ಗಣಪತಿ ಹೆಗಡೆ ಅವರು ಆ ಕಂಪನಿಯ ಶೇರು ಎಂದು ನಂಬಿ 1710094ರೂ ಹೂಡಿಕೆ ಮಾಡಿದ್ದಾರೆ. ಆದರೆ, ಆ ಕಂಪನಿಗೂ ಈ ವಾಟ್ಸಪ್ ಗುಂಪಿಗೂ ಯಾವುದೇ ಸಂಬoಧ ಇಲ್ಲ ಎಂದು ಆ ನಂತರ ಗೊತ್ತಾಗಿದೆ. ಯಾವುದೇ ಶೇರ್ ಹಂಚಿಕೆ ಆಗದ ಬಗ್ಗೆ ವೆಬ್‌ಸೈಟಿನಿಂದ ಮಾಹಿತಿ ಪಡೆದ ಅವರು ತಮಗಾದ ಮೋಸದ ಬಗ್ಗೆ ಕಾರವಾರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.