ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಕಾರಣ ಕವನ ಎಂಬಾತರಿಗೆ ಅವರ ತಂದೆ ಶಂಕರ್ ಅವರು ಚಾಕು ಚುಚ್ಚಿದ್ದಾರೆ. ಇದನ್ನು ತಪ್ಪಿಸಲು ಬಂದ ಅಳಿಯ ಮನೋಜ ಅವರಿಗೂ ಚಾಕು ಚುಚ್ಚಿ, ನಂತರ ಶಂಕರ್ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಶಿರಸಿ ತಾಲೂಕಿನ ಬನವಾಸಿಯ ರಂಗಾಪುರ ಬಳಿಯ ಮನೋಜ ಕಮಾಟೆ ಅವರು ಅದೇ ಊರಿನ ಕವನ ಅವರನ್ನು ಪ್ರೀತಿಸುತ್ತಿದ್ದರು. ಮೂರು ತಿಂಗಳ ಹಿಂದೆ ಕವನ ಹಾಗೂ ಮನೋಜ್ ಮದುವೆ ಆಗಿದ್ದರು. ನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿದ್ದರು. ಆದರೆ, ಈ ವಿವಾಹಕ್ಕೆ ಯುವತಿ ಮನೆಯವರ ಒಪ್ಪಿಗೆ ಇರಲಿಲ್ಲ. ಮನೋಜರನ್ನು ವಿವಾಹವಾಗುವುದನ್ನು ಕವನರ ತಂದೆ ವಿರೋಧಿಸಿದ್ದರು.
ವಿವಾಹದ ನಂತರ ಕೆಲ ಕಾಲ ಮುನಿಸಿಕೊಂಡಿದ್ದ ಯುವತಿ ತಂದೆ ಶಂಕರ ಕಮ್ಮಾರ್ ಕ್ರಮೇಣ ಸರಿಯಾಗಿದ್ದರು. ಆಗಾಗ ಮಗಳನ್ನು ಮಾತನಾಡಿಸಲು ಬರುತ್ತಿದ್ದರು. ಮಂಗಳವಾರ ಮಗಳನ್ನು ಮನೆಗೆ ಕರೆದೊಯ್ಯುವ ಬಗ್ಗೆ ಅಳಿಯನಲ್ಲಿ ಹೇಳಿಕೊಂಡಿದ್ದರು. ಊರಿನ ಜಾತ್ರೆ ಮುಗಿದ ನಂತರ ಪತ್ನಿಯನ್ನು ತವರಿಗೆ ಕಳುಹಿಸುವುದಾಗಿ ಮನೋಜ್ ಹೇಳಿದ್ದರು. ಅದಕ್ಕೆ ಶಂಕರ್ ಅವರು ಆ ವೇಳೆ ಯಾವುದೇ ಪ್ರತಿಕ್ರಿಯೆ ನೀಡರಲಿಲ್ಲ.
ಬುಧವಾರ ಬೆಳಗ್ಗೆ ಮತ್ತೆ ಆಗಮಿಸಿದ ಶಂಕರ್, `ನಿಮ್ಮ ವಿವಾಹ ನೋಂದಣಿಗೆ ಸಾಕ್ಷಿಯಾಗಿ ಸಹಿ ಹಾಕಿದವರು ಯಾರು?’ ಎಂದು ಪ್ರಶ್ನಿಸಿದರು. ಆಗ, ಕವನ ಅವರು ಏನೂ ಮಾತನಾಡಲಿಲ್ಲ. ಮನೋಜ್ ಅವರು ಸುಮ್ಮನಿದ್ದರು. ಇದರಿಂದ ಸಿಟ್ಟಾದ ಶಂಕರ್ ಮಗಳ ಕುತ್ತಿಗೆಗೆ ಚಾಕು ಹಿಡಿದರು. ಮಗಳು ಗರ್ಭಿಣಿ ಎಂಬುದರ ಬಗ್ಗೆ ಅರಿವಿಲ್ಲದೇ ಗಾಯಗೊಳಿಸಿದರು. ಇದನ್ನು ತಪ್ಪಿಸಲು ಬಂದ ಮನೋಜ್ ಅವರಿಗೂ ಚಾಕು ಚುಚ್ಚಿದರು.
ಇದೆಲ್ಲವೂ ಮುಗಿದ ನಂತರ ಶಂಕರ್ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಅಸ್ವಸ್ಥಗೊಂಡ ಮೂವರನ್ನು ಅಲ್ಲಿನವರು ಆಸ್ಪತ್ರೆಗೆ ದಾಖಲಿಸಿದ್ದು, ಎಲ್ಲರೂ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.