ಕುಮಟಾ ತಾಲೂಕಿನ ಹೊಲನಗದ್ದೆ ಬಸ್ ನಿಲ್ದಾಣ ಅವ್ಯವಸ್ಥೆ ಬಗ್ಗೆ ದೂರಿದರೂ ಕ್ರಮ ಜರುಗಿಸದ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಫೆ 26ರಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹೊಲನಗದ್ದೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದರು. ಅಲ್ಲಿನ ಬಸ್ ನಿಲ್ದಾಣ ಮೇಲ್ಚಾವಣಿ ಕುಸಿದ ಬಗ್ಗೆ ಈಗಾಗಲೇ ಗ್ರಾಮ ಪಂಚಾಯತಗೆ ಮಾಹಿತಿ ನೀಡಿರುವುದಾಗಿ ಸ್ಥಳೀಯರು ತಿಳಿಸಿದರು. ಅದಾಗಿಯೂ ಗ್ರಾ ಪಂ ಅಧಿಕಾರಿ ಮುನ್ನಚ್ಚರಿಕೆವಹಿಸದ ಬಗ್ಗೆ ಆಕ್ಷೇಪಿಸಿದರು.
`ಮಳೆ ಜೋರಾದರೆ ಬಸ್ ನಿಲ್ದಾಣ ಮೇಲ್ಚಾವಣಿ ಕುಸಿಯುವ ಆತಂಕವಿದ್ದು, ಈ ಬಗ್ಗೆ ಪಿಡಿಓ ನಾಗರಾಜ ನಾಯಕ ದುರಸ್ಥಿ ಮಾಡಿಸುವ ಗೋಜಿಗೆ ಹೋಗಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು.
`ಕೂಡಲೇ ಇದರ ದುರಸ್ಥಿ ನಡೆಯಬೇಕು’ ಎಂದು ಜಿ ಪಂ ಸಿಇಓ ಈಶ್ವರ ಕಾಂದೂ ಅವರಿಗೆ ಅಲ್ಲಿದ್ದವರು ವಾಟ್ಸಪ್ ಮೂಲಕ ದೂರು ಸಲ್ಲಿಸಿದರು. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಹಾಗೂ ನನ್ನೀ ಸಾಬ್, ಪಾಂಡುರoಗ ಜೊತೆಗಿದ್ದರು.