ಬೀದಿ ನಾಯಿ ಹಾಗೂ ಹುಚ್ಚು ನಾಯಿ ಕಾಟಕ್ಕೆ ಬೇಸತ್ತ ಮುಂಡಗೋಡು ಪಟ್ಟಣದ ಮಹಿಳೆಯರು ಆ ನಾಯಿಗಳ ನಿಗ್ರಹಕ್ಕಾಗಿ ಸ್ಥಳೀಯ ಆಡಳಿತದ ಮೊರೆ ಹೋಗಿದ್ದಾರೆ. ಮಂಗಳವಾರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳ ಬಳಿ ನಾಯಿ ಸಮಸ್ಯೆ ಬಗ್ಗೆ ಮಹಿಳೆಯರು ಅಳಲು ತೋಡಿಕೊಂಡರು.
`ನಂದೀಶ್ವರ ನಗರದಲ್ಲಿ ಬೀದಿ ನಾಯಿಗಳ ಹಾಗೂ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದೆ. ಫೆ 23ರಂದು ಸಹ ನಂದೀಶ್ವರ ನಗರದಲ್ಲಿ ಮೂವರು ಮಕ್ಕಳಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ. ಇದರಿಂದಾಗಿ ನಂದೀಶ್ವರ ನಗರದಲ್ಲಿ ಭಯದ ವಾತಾವರಣ ಉಂಟಾಗಿದೆ. ಮಹಿಳೆಯರು, ಮಕ್ಕಳು ಹಾಗೂ ಪುರುಷರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ನಂದೀಶ್ವರ ನಗರದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳು ಹಾಗೂ ಹುಚ್ಚು ನಾಯಿಗಳ ಹಾವಳಿ ತಡೆಗಟ್ಟಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಇದರೊಂದಿಗೆ `ನಂದೀಶ್ವರ ನಗರದಲ್ಲಿ ಚರಂಡಿಗಳಲ್ಲಿ ಕೊಳಚೆ ತುಂಬಿಕೊAಡು ದುರ್ವಾಸನೆ ಹೆಚ್ಚಿದೆ. ಸೊಳ್ಳೆಗಳ ಕಚ್ಚುವಿಕೆಯಿಂದಾಗಿ ಜನರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ ವಾರ್ಡ ಸದಸ್ಯರಿಗೆ ಸಹ ಕಾಳಜಿಯಿಲ್ಲ’ ಎಂದು ದೂರಿದರು. `ಸದಸ್ಯರ ನಿರ್ಲಕ್ಷತನದ ಧೋರಣೆಯಿಂದಾಗಿ ನಂದೀಶ್ವರ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಆದ್ದರಿಂದ ಸಂಬoಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಂದೀಶ್ವರ ನಗರದ ಪರಿಸ್ಥಿತಿಯನ್ನು ವೀಕ್ಷಿಸಿ ಚರಂಡಿಯನ್ನು ಸ್ವಚ್ಛಗೊಳಿಸಲು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು. `ಒಂದು ವಾರದೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವೆವು’ ಎಂದು ಎಚ್ಚರಿಸಿದರು.