ತಂಗಿ ಹಾಗೂ ತಂಗಿಯ ಮಗುವನ್ನು ಬೈಕಿನಲ್ಲಿ ಕೂರಿಸಿಕೊಂಡು ವೇಗವಾಗಿ ಬಂದ ಪೊಲೀಸ್ ಸಿಬ್ಬಂದಿ ಅಬ್ಬಾಸಲಿ ನಂದಳ್ಳಿ ಅವರ ದುಡುಕುತನದಿಂದ ಅವರ ತಂಗಿ ಸಾವನಪ್ಪಿದ್ದಾರೆ.
ಅಬ್ಬಾಸಲಿ ನಂದಳ್ಳಿ ಅವರು ಹಾವೇರಿಯ ಶಿಗ್ಗಾವಿಯವರು. ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಅವರ ತಂಗಿ ಸಮ್ರೀನಾಬಾನು (24) ಮುಂಡಗೋಡದ ಕಾತೂರಿನಲ್ಲಿ ವಾಸವಾಗಿದ್ದರು. ಫೆ 24ರಂದು ಸಮ್ರೀನಾಭಾನು ಹಾಗೂ ಅವರ ಪುತ್ರಿ ಜಿಯಾ ಭಾನು (2 ವರ್ಷ) ಅವರ ಜೊತೆ ಅಬ್ಬಾಸಲಿ ನಂದಳ್ಳಿ ವೇಗವಾಗಿ ಬೈಕ್ ಓಡಿಸಿದರು.
ಬಂಕಾಪುರದಿoದ ಮುಂಡಗೋಡು ಕಡೆ ಬೈಕ್ ಓಡಿಸಿಕೊಂಡು ಬರುವಾಗ ಮುಂಡಗೋಡಿನ ಸ್ಮಶಾನಕಟ್ಟೆ ಕ್ರಾಸಿನ ಬಳಿ ಬೈಕ್ ಸ್ಕಿಡ್ ಆಯಿತು. ಪರಿಣಾಮ ಬೈಕಿನಿಂದ ಬಿದ್ದ ಮೂವರು ಗಾಯಗೊಂಡರು. ಅಲ್ಲಿದ್ದ ಜನ ಮೂವರನ್ನು ಮುಂಡಗೋಡು ಆಸ್ಪತ್ರೆಗೆ ಕಳುಹಿಸಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಸಮ್ರೀನಾಬಾನು ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ಕರೆದೊಯ್ಯುವ ಪ್ರಯತ್ನ ನಡೆಯಿತು.
ಆದರೆ, ಪ್ರಯೋಜನವಾಗಲಿಲ್ಲ. ಬೈಕಿನಿಂದ ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಸಮ್ರೀನಾಬಾನು ಮಾರ್ಗಮದ್ಯೆಯೇ ಸಾವನಪ್ಪಿದರು. ಕಾತೂರಿನ ಮಬೂಬಸಾಬ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡರು.



