ಕಾರವಾರ ನಗರದಿಂದ ಮೂರುವರೆ ಕಿಮೀ ದೂರದಲ್ಲಿದ್ದರೂ ಆಧುನಿಕ ಸೌಲಭ್ಯಗಳಿಂದ ದೂರವಿದ್ದ ಗುಡ್ಡಳ್ಳಿಗೆ ಈ ದಿನ ನಾಲ್ಕು ಚಕ್ರದ ವಾಹನ ಪ್ರವೇಶಿಸಿದೆ. ಇದೇ ಮೊದಲ ಬಾರಿ ಊರಿನವರ ಬಳಕೆಗಾಗಿ ಗುಡ್ಡಳ್ಳಿಗೆ ಬಂದ ಬುಲೇರೋ ವಾಹನ ಏರಿದ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿದ್ದಾರೆ. ಇನ್ಮುಂದೆ ಪ್ರತಿ ದಿನ ಎರಡು ಬಾರಿ ಗುಡ್ಡಳ್ಳಿಗೆ ಈ ವಾಹನ ಓಡಾಡಲಿದೆ. ಆ ಊರಿನವರ ಸರಕು-ಸಾಮಗ್ರಿಗಳ ಸಾಗಾಣಿಕೆಗೆ ನಗರಸಭೆಯ ಈ ವಾಹನ ವ್ಯವಸ್ಥೆ ನೆರವಾಗಲಿದೆ.
ಗುಡ್ಡಳ್ಳಿ ಗ್ರಾಮಕ್ಕೆ ತೆರಳಲು ಈವರೆಗೂ ಸರಿಯಾದ ರಸ್ತೆ ಸಂಪರ್ಕವಿರಲಿಲ್ಲ. ಕಾಯಿಲೆಯಿಂದ ಬಳಲುತ್ತಿರುವವರು ಆಸ್ಪತ್ರೆ ಸೇರಲು ಸಮಸ್ಯೆ ಅನುಭವಿಸುತ್ತಿದ್ದರು. ಊರಿನಲ್ಲಿ ಸಾವು ಉಂಟಾದಾಗ ಸ್ಮಶಾನಕ್ಕೆ ಶವ ಸಾಗಿಸಲು ಸಹ ಸಮಸ್ಯೆಯಾಗಿತ್ತು. ಈ ಎಲ್ಲಾ ವಿಷಯಗಳ ಬಗ್ಗೆ ಗ್ರಾಮದ ಜನ ಕಂಡ ಕಂಡವರ ಕಾಲಿಗೆ ಬಿದ್ದು ಸಮಸ್ಯೆ ಬಗೆಹರಿಸುವಂತೆ ಅಂಗಲಾಚುತ್ತಿದ್ದರು. ಉತ್ತರ ಕನ್ನಡ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ ಬಂದಾಗಲೆಲ್ಲ ಗುಡ್ಡಳ್ಳಿಯ ಜನ ಅಧಿಕಾರಿಗಳನ್ನು ಭೇಟಿ ಮಾಡಿ ಊರಿನ ಸಮಸ್ಯೆ ಹೇಳುತ್ತಿದ್ದರು. ಆದರೆ, ಯಾವ ಅಧಿಕಾರಿಯೂ ಅಲ್ಲಿನವರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಅದಾಗಿಯೂ, ಜಿಲ್ಲಾಧಿಕಾರಿಯಾಗಿ ಆಗಮಿಸಿದ ಕೆ ಲಕ್ಷ್ಮೀಪ್ರಿಯಾ ಅವರನ್ನು ಗುಡ್ಡಳ್ಳಿಯ ಜನ ಭೇಟಿ ಮಾಡಿ ಊರಿನ ಬಗ್ಗೆ ಹೇಳಿಕೊಂಡಿದ್ದರು. ಅವರ ಮನವಿ ಸ್ವೀಕರಿಸಿದ ಲಕ್ಷ್ಮೀಪ್ರಿಯಾ ಜನವರಿ 17ರಂದು ದಿಢೀರ್ ಆಗಿ ಆ ಊರಿಗೆ ಭೇಟಿ ನೀಡಿದ್ದರು. ಗುಡ್ಡಳ್ಳಿ ಊರಿನವರ ಸಮಸ್ಯೆಯನ್ನು ಕಂಡ ಅವರು ಅಲ್ಲಿನವರ ಸ್ಥಿತಿ ಕಂಡು ಮರುಕವ್ಯಕ್ತಪಡಿಸಿದರು. ನಗರಸಭೆ ವ್ಯಾಪ್ತಿಯಲ್ಲಿದ್ದರೂ ಕನಿಷ್ಠ ಸಂಪರ್ಕ ವ್ಯವಸ್ಥೆಯೂ ಇಲ್ಲದ ಊರಿನ ಸ್ಥಿತಿ ಸುಧಾರಣೆಗೆ ಶ್ರಮಿಸಿದರು.
ಜನರ ಬೇಡಿಕೆ ಅನ್ವಯ ಊರಿಗೆ ರಸ್ತೆ ಸಂಪರ್ಕ ಕಲ್ಪಿಸುವುದಕ್ಕಾಗಿ ಎಲ್ಲಾ ಬಗೆಯ ಪ್ರಯತ್ನ ನಡೆಸಿದರು. ಅದು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದೇ ಇದ್ದರೂ ಜನರ ಓಡಾಟಕ್ಕೆ ಅನುಕೂಲವಾಗುವಂತೆ ನಗರಸಭೆ ವಾಹನ ಓಡಾಟಕ್ಕೆ ಸೂಚನೆ ನೀಡಿದರು. ಜೊತೆಗೆ ಅಲ್ಲಿನ ಶಾಲೆಗೆ ಹೊಸ ರೂಪ ನೀಡಲು ಸಂಕಲ್ಪಿಸಿದರು. ಮುಖ್ಯವಾಗಿ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆಯಾಗದ0ತೆ ಮುನ್ನಚ್ಚರಿಕೆವಹಿಸಿದರು.
ಇದೆಲ್ಲದರ ಪರಿಣಾಮವಾಗಿ ನಗರಸಭೆ ಪೌರಾಯುಕ್ತ ಜಗದೀಶ ಹುಲಿಗಜ್ಜೆ ಹಂತ ಹಂತವಾಗಿ ಗುಡ್ಡಳ್ಳಿ ಅಭಿವೃದ್ಧಿ ಕೆಲಸಕ್ಕೆ ಮುನ್ನುಡಿಯಾದರು. ಕಾಲುದಾರಿಯಲ್ಲಿನ ಉಬ್ಬು-ತಗ್ಗುಗಳನ್ನು ಸಮದಟ್ಟು ಮಾಡಿದರು. ಲೋಕೋಪಯೋಗಿ ಇಲಾಖೆಯವರನ್ನು ಸಂಪರ್ಕಿಸಿ ಮಂಜೂರಿಯಾದ 1.2ಕಿಮೀ ದೂರದವರೆಗಿನ ರಸ್ತೆ ನಿರ್ಮಾಣವನ್ನು ನೆನಪಿಸಿದರು. ಮುಂದಿನ ಹಾದಿಯಲ್ಲಿ ಅರಣ್ಯ ನಾಶವಾಗದಂತೆ ಎಚ್ಚರವಹಿಸಿ ನಗರಸಭೆಯ ಬುಲೇರೋ ವಾಹನ ಓಡಾಟಕ್ಕೆ ಅಗತ್ಯವಿರುವಷ್ಟು ರಸ್ತೆ ಮಾಡಿಕೊಂಡರು.
ಇದರೊ0ದಿಗೆ ನಗರಸಭೆ ಅನುದಾನದಲ್ಲಿ ಶಾಲೆಗೆ ಬಣ್ಣ ಬಡಿದರು. ಜನರ ಅನುಕೂಲಕ್ಕಾಗಿ ಅಲ್ಲಿದ್ದ ಬಾವಿ ಸ್ವಚ್ಛಗೊಳಿಸಿ ಕುಡಿಯುವ ನೀರಿನ ಸಮಸ್ಯೆ ದೂರ ಮಾಡಿದರು. ಸದ್ಯ ನಿತ್ಯ ಬೆಳಗ್ಗೆ 7 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ನಗರಸಭೆ `ನಗರ ರಕ್ಷಕ’ ವಾಹನ ಗುಡ್ಡಳ್ಳಿಗೆ ಹೋಗಿ ಬರಲಿದೆ. ಇದಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ತುರ್ತು ಸಮಯದಲ್ಲಿಯೂ ಆ ವಾಹನವನ್ನು ಗುಡ್ಡಳ್ಳಿ ಜನರ ಬಳಕೆಗೆ ನೀಡಲು ಕಾರವಾರ ನಗರಸಭೆ ನಿರ್ಧರಿಸಿದೆ.







