`ಬಸವ ವಸತಿ ಯೋಜನೆ ಅಡಿ ಮಂಜೂರಾದ ಮನೆಗಳಿಗೆ ಐದು ವರ್ಷವಾದರೂ ಸರಿಯಾಗಿ ಹಣ ಬಿಡುಗಡೆಯಾಗಿಲ್ಲ. ಈ ಸರ್ಕಾರವನ್ನು ಎಲ್ಲರೂ ದಿವಾಳಿ ಸರ್ಕಾರ ಎಂದು ವ್ಯಂಗ್ಯವಾಡುತ್ತಿದ್ದಾರೆ’ ಎಂದು ಕುಮಟಾ-ಹೊನ್ನಾವರ ಕ್ಷೇತ್ರ ಶಾಸಕ ದಿನಕರ ಶೆಟ್ಟಿ ಅಧಿವೇಶನದಲ್ಲಿ ಹೇಳಿದ್ದಾರೆ. ಅವರು ಪ್ರಸ್ತಾಪಿಸಿದ ಈ ವಿಷಯ ಸದನದಲ್ಲಿ ಭಾರೀ ಪ್ರಮಾಣದ ಚರ್ಚೆಗೆ ಒಳಗಾಗಿದ್ದು, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಅದು ಫಲ ನೀಡದ ಕಾರಣ ಆಡಳಿತ ಪಕ್ಷದವರು ಮುಜುಗರ ಅನುಭವಿಸಿದರು.
`2020-21ರ ಸಾಲಿನಲ್ಲಿ ಬಸವ ವಸತಿ ಯೋಜನೆ ಅಡಿ ಕುಮಟಾ-ಹೊನ್ನಾವರ ಕ್ಷೇತ್ರಕ್ಕೆ 2250ಮನೆಗಳು ಮಂಜೂರಿಯಾಗಿತ್ತು. ಕೆಲವರಿಗೆ ಮಾತ್ರ ಒಂದು ಕಂತಿನ ಹಣ ಬಂದಿದೆ. ಉಳಿದ ಹಣದ ಬಗ್ಗೆ ಯಾರಿಗೂ ಸ್ಪಷ್ಠನೆ ಇಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾರನ್ನು ಪ್ರಶ್ನಿಸಬೇಕು? ಎಂಬ ಬಗ್ಗೆಯೂ ಗೊತ್ತಾಗುತ್ತಿಲ್ಲ’ ಎನ್ನುತ್ತ ದಿನಕರ ಶೆಟ್ಟಿ ಸದನದ ಗಮನಸೆಳೆದರು. ಈ ನಡುವೆ ಸದನದಲ್ಲಿ `ದಿವಾಳಿ ಸರ್ಕಾರ’ ಎಂಬ ಧ್ವನಿ ಕೇಳಿಸಿದ್ದು, ಅದಕ್ಕೆ ಮತ್ತೆ ಧ್ವನಿಗೂಡಿಸಿದ ದಿನಕರ ಶೆಟ್ಟಿ `ಎಲ್ಲರೂ ಈ ಸರ್ಕಾರವನ್ನು ದಿವಾಳಿ ಸರ್ಕಾರ ಎನ್ನುತ್ತಿದ್ದಾರೆ. ಆದರೆ, ನಾನು ಹಾಗೇ ಹೇಳಿಲ್ಲ’ ಎನ್ನುತ್ತ ಸಮಜಾಯಿಶಿ ನೀಡಿದರು.
`ಮನೆಗೆ ಸಿಗುವ ಹಣ ಬಾರದ ಕಾರಣ ಬಡವರಿಗೆ ಹಾಗೂ ಹಿಂದುಳಿದವರಿಗೆ ಅನ್ಯಾಯವಾಗುತ್ತಿದೆ. 2020-21ರಲ್ಲಿ ಘೋಷಿಸಿದ ಹಣ ಪಾವತಿಸಿ ಇದೀಗ ಹೊಸ ಮನೆಗಳ ಮಂಜೂರಿ ಆಗಬೇಕಿತ್ತು. ಬಸವ ವಸತಿ ಯೋಜನೆ ಪಂಚ ವಾರ್ಷಿಕ ಯೋಜನೆಗಿಂತಲೂ ನಿಧಾನವಾಗಿದೆ’ ಎಂಬ ಕುರಿತು ಚರ್ಚೆ ನಡೆಯಿತು. `ಈ ಸರ್ಕಾರದಿಂದ ಅನೇಕರಿಗೆ ಅನ್ಯಾಯವಾಗಿದೆ’ ಎಂದು ದಿನಕರ ಶೆಟ್ಟಿ ಮುಂದುವರೆದು ಮಾತನಾಡಿದರು. `ಈ ಸರ್ಕಾರಕ್ಕೆ ಬಡವರ ಬಗ್ಗೆ ಕಳಕಳಿಯಿಲ್ಲ. ಹೀಗಾಗಿ ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ. ನಾಲ್ಕು ವರ್ಷಗಳ ಕಾಲ ಹೀಗೆ ಬಾಕಿಯಿರಿಸಿಕೊಳ್ಳುವುದು ಸರಿಯಲ್ಲ’ ಎಂದು ಬೇಸರವ್ಯಕ್ತಪಡಿಸಿದರು. `ರಾಜ್ಯದ ಆರ್ಥಿಕತೆ ಹಾಗೂ ಭಾಗ್ಯಗಳ ಬಗ್ಗೆ ಗಮನವಿರಲಿ’ ಎಂದು ದಿನಕರ ಶೆಟ್ಟಿ ಸದನದಲ್ಲಿ ಸಲಹೆಯನ್ನು ನೀಡಿದರು.
`ಕುಮಟಾ ಹೊನ್ನಾವರ ಕ್ಷೇತ್ರಕ್ಕೆ 2250ಮನೆಗಳು ಮಂಜೂರಿಯಾಗಿದ್ದು ಸತ್ಯ. 1.20 ಲಕ್ಷ ಸರ್ಕಾರ ಸಬ್ಸಿಡಿ ನೀಡಬೇಕಿದ್ದು, ತಲಾ 30 ಸಾವಿರ ರೂಪಾಯಿಯಂತೆ ನಾಲ್ಕು ಕಂತುಗಳಲ್ಲಿ ಹಣ ನೀಡುತ್ತದೆ. 835 ಮನೆ ಮುಕ್ತಾಯವಾಗಿದ್ದು, 986 ಮನೆಗಳು ನಿರ್ಮಾಣ ಹಂತದಲ್ಲಿವೆ. 117 ಮನೆಗಳ ನಿರ್ಮಾಣ ಇನ್ನೂ ಆಗಬೇಕಿದೆ. 25 ಮನೆ ಕೆಲಸ ತಾತ್ಕಾಲಿಕವಾಗಿ ನಿಂತಿದೆ. 80 ಮನೆಗಳು ರದ್ದಾಗಿದೆ. ಫಲಾನುಭವಿಗಳಿಗೆ ಒಟ್ಟು 27 ಕೋಟಿ ರೂ ಜಮಾ ಆಗಬೇಕಿದ್ದು, ಈ ಪೈಕಿ 12 ಕೋಟಿ ರೂ ಜಮಾ ಆಗಿದೆ. ಉಳಿದ ಹಣ ಬಿಡುಗಡೆಗಾಗಿ ಆರ್ಥಿಕ ಇಲಾಖೆ ಒಪ್ಪಿಗೆಗೆ ಕಳುಹಿಸಲಾಗಿದೆ’ ಎಂದು ವಸತಿ ಸಚಿವರ ಪರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಉತ್ತರಿಸಿದರು. ಸದನದಲ್ಲಿ ಓದಲಾಯಿತು. `ನಮ್ಮ ಸರ್ಕಾರ ಹಣ ಬಿಡುಗಡೆಗೆ ಬದ್ಧ. ಹಣ ಕೊಡಬೇಕು. ಕೊಡುತ್ತೇವೆ’ ಎಂದು ಸರ್ಕಾರದ ಪ್ರತಿನಿಧಿಗಳು ಸ್ಪಷ್ಠಪಡಿಸಿದರು.
ಶಾಸಕ ದಿನಕರ ಶೆಟ್ಟಿ ಮಾತು ಹಾಗೂ ಈ ಬಗ್ಗೆ ನಡೆದ ಚರ್ಚೆಯ ವಿಡಿಯೋ ಇಲ್ಲಿ ನೋಡಿ..