ಕಾರವಾರ ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ಅವರು ನಂದನಗದ್ದಾದ ಸಾಹಿಲ್ ಕಲ್ಗುಟ್ಕರ್ ಅವರ ಲಾರಿ ಸುಡುವುದಾಗಿ ಬೆದರಿಸಿದ್ದಾರೆ. ಸಾಹಿಲ್ ಕಲ್ಗುಟ್ಕರ್ ಸಹ ಟಿಪ್ಪರ್ ಹಾಯಿಸಿ ಕೊಲೆ ಮಾಡುವುದಾಗಿ ಪ್ರಶಾಂತ ಗೋವೇಕರ್ ಅವರನ್ನು ಹೆದರಿಸಿದ್ದಾರೆ.
ನಂದನಗದ್ದಾ ಸುಂಕೇರಿಯ ವಿಶ್ರಾಂತಿ ಕಟ್ಟಾದಲ್ಲಿ ವಾಸವಾಗಿರುವ ಸಾಹಿಲ್ ಕಲ್ಗುಟ್ಕರ್ ಲಾರಿ ಉದ್ದಿಮೆ ನಡೆಸುತ್ತಾರೆ. ಸಾಹಿಲ್ ಕಲ್ಗುಟ್ಕರ್ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಾರೆ ಎಂದು ಪ್ರಶಾಂತ ಗೋವೇಕರ್ ವಿವಿಧ ಇಲಾಖೆಗೆ ದೂರು ನೀಡಿದ್ದಾರೆ. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿದ್ದು, ಅದು ಇದೀಗ ಕೊಲೆ ಬೆದರಿಕೆಯವರೆಗೆ ಬಂದು ಮುಟ್ಟಿದೆ.
ಫೆ 22ರಂದು ಪ್ರಶಾಂತ ಗೋವೇಕರ್ ಕಾರವಾರದ ಟೋಪ್ ಬೇನ್ಜರ್ ಅಂಗಡಿ ಮುಂದೆ ನಿಂತಾಗ ಸಾಹಿಲ್ ಕಲ್ಗುಟ್ಕರ್ ಹಾಗೂ ಅವರ ತಂದೆ ಸಂತೋಷ ಕಲ್ಗುಟ್ಕರ್ ದಾಳಿ ನಡೆಸಿದ ಬಗ್ಗೆಯೂ ಪ್ರಶಾಂತ ಗೋವೇಕರ್ ದೂರಿದ್ದಾರೆ. ಆ ವೇಳೆ ಸಾಹಿಲ್ ಕಲ್ಗುಟ್ಕರ್ ಕೈ ಬೆರಳುಗಳಿಗೆ ಪಂಚನ್ನು ಹಾಕಿ ತನಗೆ ಹೊಡೆದಿದ್ದಾರೆ ಎಂದು ಸಹ ಪ್ರಶಾಂತ ಗೋವೇಕರ್ ಆರೋಪಿಸಿದ್ದಾರೆ.
`ವೈಲವಾಡ ಬಳಿಯ ಸಿದ್ದರ್ ಐಟಿಐ ಕಾಲೇಜು ಬಳಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಗಣಿ ಇಲಾಖೆಗೆ ದೂರು ನೀಡಿದ್ದು, ಊರಿನವರೆಲ್ಲರೂ ಸೇರಿ ಲಾರಿ ಹಿಡಿದು ಸರ್ಕಾರಕ್ಕೆ ಒಪ್ಪಿಸಿದ ನಿದರ್ಶನವಿದೆ. ಹೀಗಾಗಿ ಂತಾಗ ಸಾಹಿಲ್ ಕಲ್ಗುಟ್ಕರ್ ತಮ್ಮ ವಿರುದ್ಧ ದ್ವೇಷಹೊಂದಿದ್ದಾರೆ. ಟಿಪ್ಪರ್ ಹಾಯಿಸಿ ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾರೆ’ ಎಂದು ಪ್ರಶಾಂತ ಗೋವೇಕರ್ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಎರಡು ಕಡೆಯವರ ಮಾತು ಆಲಿಸಿ, ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.