ಗುಡ್ಡದ ಮೇಲಿನ ಗೇರು ಗಿಡಕ್ಕೆ ಸಿಂಪಡಿಸಿದ ಎಂಡೋಸಲ್ಪಾನ್ ರಾಸಾಯನಿಕದ ಪ್ರಭಾವ ಮೂರನೇ ತಲೆಮಾರಿಗೂ ವ್ಯಾಪಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ 631 ಎಂಡೋಸಲ್ಪಾನ್ ರೋಗಿಗಳು ಪತ್ತೆಯಾಗಿದ್ದಾರೆ!
ಗೇರು ಅಭಿವೃದ್ಧಿ ನಿಗಮವೂ 1986ರಿಂದ 2011ರ ಅವಧಿಯಲ್ಲಿ ಗೇರು ಗಿಡಗಳಿಗೆ ಔಷಧಿ ಸಿಂಪಡಿಸಿತ್ತು. ಅದರ ಪರಿಣಾಮ ಈವರೆಗೆ ಸಾವಿರಾರು ಜನ ತೊಂದರೆ ಅನುಭವಿಸಿದ್ದಾರೆ. ಆ ಕ್ರಿಮಿನಾಶಕದ ಪರಿಣಾಮ ಈಗಲೂ ಅನೇಕ ಕಡೆ ಅಂಗವಿಕಲ ಮಕ್ಕಳು ಹುಟ್ಟುತ್ತಿದ್ದಾರೆ. ಭಟ್ಕಳ, ಶಿರಸಿ, ಸಿದ್ದಾಪುರ, ಶಿರಾಲಿ, ಕುಮಟಾ, ಹೊನ್ನಾವರ, ಅಂಕೋಲಾ ನಡೆದ ಸರ್ವೇಯಲ್ಲಿ ಎಂಡೋಸಲ್ಪಾನ್ ಪರಿಣಾಮ ಈಗಲೂ ಜೀವಂತವಾಗಿರುವುದಕ್ಕೆ ಸಾಕ್ಷಿ ಸಿಕ್ಕಿದೆ.
ಎಂಡೋಸಲ್ಫಾನ್ ವಿಷಕಾರಿ ಕ್ರಿಮಿನಾಶಕ ಸಿಂಪಡಣೆಯಿAದ ದಕ್ಷಿಣ ಕನ್ನಡದಲ್ಲಿ 3,607 ಜನರು, ಉಡುಪಿಯಲ್ಲಿ 1,514 ಜನರು, ಉತ್ತರ ಕನ್ನಡ ಜಿಲ್ಲೆಯಲ್ಲಿ 1,793 ಜನರು ಸೇರಿ ಒಟ್ಟು 6,914 ಜನರು ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದು ದಾಖಲೆಗಳಿವೆ. ಆದರೆ, ಈ ಬಗ್ಗೆ ಸರಿಯಾದ ಸಮೀಕ್ಷೆಯೇ ನಡೆದಿಲ್ಲ ಎಂಬ ಆರೋಪವಿದ್ದು, ಅದಕ್ಕೆ ಪೂರಕವಾಗಿ ಎರಡನೇ ಹಂತದ ಸರ್ವೆಯಲ್ಲಿ 631 ಪ್ರಕರಣ ಪತ್ತೆಯಾಗಿದೆ.
ಹೊಸ ಪ್ರಕರಣಗಳು ವರದಿಯಾದ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ ನೀರಜ್ ಅಧಿಕೃತ ಮಾಹಿತಿ ನೀಡಿದ್ದಾರೆ. `ಹೊಸದಾಗಿ ಪತ್ತೆಯಾಗಿರುವ ಪ್ರಕರಣದವರ ಮಾಹಿತಿ ಪಡೆದು ಅವರಿಗೆ ಅಂಗವಿಕಲ ಪ್ರಮಾಣ ಪತ್ರ ನೀಡಲಾಗುತ್ತಿದೆ. ಅಲ್ಲದೇ ಇಲಾಖೆಯ ಇತರೆ ಸೌಲಭ್ಯವನ್ನ ಕೊಡುವ ಪ್ರಕ್ರಿಯೆ ನಡೆದಿದೆ’ ಎಂದವರು ಹೇಳಿದ್ದಾರೆ.