ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗಾಗಿ ಜಲ ಜೀವನ ಮಿಶನ್ ಅಡಿ 137 ಕೊಳವೆ ಬಾವಿ ತೋಡಲಾಗಿದೆ. ಆದರೆ, ದಾಖಲೆಗಳ ಪ್ರಕಾರ 37 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿಲ್ಲ!
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಡಿ ವೈಜ್ಞಾನಿಕವಾಗಿ ನೀರಿನ ಲಭ್ಯತೆ ನೋಡುವ ಭೂ ವಿಜ್ಞಾನ ಅಧಿಕಾರಿಗಳಿರುತ್ತಾರೆ. ಆದರೆ, ಆ ಅಧಿಕಾರಿಗಳ ಸಂಪರ್ಕ ಮಾಡದೇ ಕೆಲವಡೆ ಕೊಳವೆ ಬಾವಿ ತೋಡಲಾಗುತ್ತದೆ. ಗಣಿ ಇಲಾಖೆ ಅಧಿಕಾರಿಗಳು ಸೂಚಿಸಿದ ಕಡೆ ಕೊಳವೆ ಬಾವಿ ತೋಡಿದರೂ ನೀರು ಬಾರದೇ ಇದ್ದರೆ ಆ ಅಧಿಕಾರಿಯ ಅಧ್ಯಯನ ಕೊರತೆ, ಕರ್ತವ್ಯ ಲೋಪ ಹಾಗೂ ಗಣಿ ಅಧಿಕಾರಿಯಿಂದ ಸರ್ಕಾರಿ ಬೊಕ್ಕಸಕ್ಕೆ ನಷ್ಟವಾದ ಬಗ್ಗೆ ಕ್ರಮ ಕೈಗೊಳ್ಳಲು ಅವಕಾಶವಿದೆ.
ಅದಾಗಿಯೂ, ಸರ್ಕಾರಿ ಕೊಳವೆ ಬಾವಿ ವಿಷಯದಲ್ಲಿ ಪದೇ ಪದೇ ಆಡಳಿತ ಎಡವುತ್ತಿದೆ. ಇನ್ನೂ ಹಲವು ಬಾರಿ ಕೊಳವೆ ಬಾವಿ ನಿರ್ಮಿಸುವವರು ಹಾಗೂ ಅಧಿಕಾರಿಗಳ ಒಳ ಒಪ್ಪಂದದಿoದಲೂ ವಿಫಲ ಕೊಳವೆ ಬಾವಿ ಸಂಖ್ಯೆ ಹೆಚ್ಚಾಗಿರುವ ಆರೋಪಗಳಿವೆ. ಹಲವು ಕಡೆ ಕೊರೆದ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿವೆ. ಇದರಿಂದ ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹೀಗಿರುವ ಕೊಳವೆ ಬಾವಿಗಳನ್ನು ಸಹ ವಿಫಲ ಎಂದು ಟಿಪ್ಪಣಿ ಬರೆದು, ಅವುಗಳ ಮರುಭರಣದ ಪ್ರಯತ್ನ ನಡೆಯದ ಉದಾಹರಣೆಗಳಿವೆ.
ಬನವಾಸಿ, ಪಾರ್ಸಿ, ಅಂಡಗಿ, ಭಾಶಿ ಮೊದಲಾದ ಕಡೆ ಸಾಕಷ್ಟು ನೀರಿನ ಕೊರತೆಯಿದೆ. ಕೆಲವೊಮ್ಮೆ ಟ್ಯಾಂಕರ್ ಮೂಲಕವೂ ಅಲ್ಲಲ್ಲಿ ನೀರು ಸರಬಾರು ಮಾಡಲಾಗುತ್ತದೆ. ಆದರೂ, ನೀರಿನ ದಾಹ ತೀರುತ್ತಿಲ್ಲ.