ದೇವಿಕಾನ್ ದೇವಿ ಉತ್ಸವದ ವರ್ದಂತಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ಮಮತಾ ನಾಯ್ಕ ದಂಪತಿಗೆ ರತ್ನಾಕರ ನಾಯ್ಕ ಎಂಬಾತರು ತಮ್ಮ ಖಾಸಗಿ ಅಂಗ ಪ್ರದರ್ಶಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಕಾರಣ ಅವರ ಪತಿ ಸುರೇಶ ನಾಯ್ಕ ಅವರಿಗೆ 12 ಜನರು ಸೇರಿ ಹೊಡೆಯುವುದಾಗಿ ಬೆದರಿಸಿದ್ದಾರೆ!
ಹೊನ್ನಾವರದ ಮಂಕಿ, ಬಣಸಾಲೆಯ ಮಮತಾ ನಾಯ್ಕ ಅವರು ತಮ್ಮ ಪತಿ ಸುರೇಶ ನಾಯ್ಕರ ಜೊತೆ ದೇವಿಕಾನ್ ದೇವಿ ಉತ್ಸವದ ವರ್ದಂತಿ ಉತ್ಸವಕ್ಕೆ ಹೋಗಿದ್ದರು. ಪೂಜೆ ಮುಗಿಸಿ ಮರಳುವಾಗ ಮಂಕಿಯ ಬಣಸಾಲೆ ಪ್ರಿಯದರ್ಶಿನಿ ವೈನ್‌ಶಾಪ್ ಬಳಿ ಮಾವಿನಕಟ್ಟಾದ ರತ್ನಾಕರ ನಾಯ್ಕ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಎಲ್ಲರಿಗೂ ಕಾಣುವಂತೆ ಮೂತ್ರ ವಿಸರ್ಜನೆ ಮಾಡುತ್ತಿದ್ದರಿಂದ ಮಹಿಳೆಯರು ಮುಜುಗರಕ್ಕೆ ಒಳಗಾದರು.
`ಯಾಕೆ ಈ ರೀತಿ ವರ್ತಿಸುತ್ತೀಯಾ?’ ಎಂದು ಸುರೇಶ ನಾಯ್ಕ ಅವರು ರತ್ನಾಕರ ನಾಯ್ಕರನ್ನು ಪ್ರಶ್ನಿಸಿದರು. ಆಗ, ರತ್ನಾಕರ್ ನಾಯ್ಕ ಅವರು ಸುರೇಶ ನಾಯ್ಕರನ್ನು ಕೆಟ್ಟದಾಗಿ ನಿಂದಿಸಿದರು. ಇದೇ ವಿಷಯವಾಗಿ ರತ್ನಾಕರ ನಾಯ್ಕ ದ್ವೇಷಹೊಂದಿದ್ದರು. ಮಾರ್ಚ 6ರ ರಾತ್ರಿ ಸುರೇಶ ನಾಯ್ಕರಿಗೆ ಫೋನ್ ಬಂದಿದ್ದು, ಮಾರುಕಟ್ಟೆ ಬಳಿ ಬರುವಂತೆ ಒಬ್ಬರು ತಿಳಿಸಿದರು. ಯಾಕೆ ಎಂದು ಪ್ರಶ್ನಿಸಿದಾಗ `10-12 ಜನ ಸೇರಿದ್ದೇವೆ. ನಿನಗೆ ಹೊಡೆಯುತ್ತೇವೆ’ ಎಂದು ಬೆದರಿಸಿದರು.
ಅದೇ ದಿನ ಮಮತಾ ನಾಯ್ಕ ಅವರ ಅಣ್ಣನಿಗೆ ಫೋನ್ ಮಾಡಿದ ಸಂಗಾಣಿಹಿತ್ಲದ ದೀಪಕ ನಾಯ್ಕ `ಸುರೇಶ ನಾಯ್ಕರಿಗೆ ಎಲ್ಲರೂ ಸೇರಿ ಹೊಡೆಯುತ್ತೇವೆ’ ಎಂದು ದಮ್ಕಿ ಹಾಕಿದರು. ಈ ಬಗ್ಗೆ ಅದೇ ದಿನ ಮಮತಾ ನಾಯ್ಕ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ತಮ್ಮ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಮನವಿ ಮಾಡಿದರು.
ಪೊಲೀಸರು ವಿಚಾರಣೆ ನಡೆಸಿ, ಭದ್ರತೆ ನೀಡುವ ಭರವಸೆ ನೀಡಿದರು. ಅದಾಗಿಯೂ ಸಮಾಧಾನಗೊಳ್ಳದ ಮಮತಾ ನಾಯ್ಕ ಈ ಪ್ರಕರಣದ ತನಿಖೆಗಾಗಿ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಸೂಚನೆ ಮೇರೆಗೆ ಮಂಕಿ ಪೊಲೀಸ್ ಠಾಣೆ ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ.