ಯಲ್ಲಾಪುರದ ಕಿರವತ್ತಿಯಲ್ಲಿ ಹೋಳಿ ಆಚರಣೆ ವೇಳೆ ಗಲಾಟೆ ನಡೆದಿದೆ. ಈ ಗಲಾಟೆ ಹೊಡೆದಾಟದ ಸ್ವರೂಪಪಡೆದಿದ್ದು, ಕೊನೆಗೆ ರಾಜಿ-ಸಂದಾನದ ಮೂಲಕ ಅಂತ್ಯವಾಗಿದೆ.
ಲಭ್ಯವಿರುವ ಮಾಹಿತಿ ಪ್ರಕಾರ ಹೋಳಿ ಹಬ್ಬದ ವೇಳೆ ದೊಡ್ಡದಾಗಿ ಮೈಕ್ ಹಚ್ಚಲಾಗಿತ್ತು. ಮೈಕಿನ ಸದ್ದು ಕಡಿಮೆ ಮಾಡುವಂತೆ ಪೊಲೀಸರು ತಾಕೀತು ಮಾಡಿದ್ದರು. ಇದೇ ವಿಷಯವಾಗಿ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿಗೆ ಮಾತು ಬೆಳೆಯಿತು. ಕೆಲವರು ಪೊಲೀಸ್ ಅಧಿಕಾರಿಯೊಬ್ಬರನ್ನು ಹಿಡಿದು ತಳ್ಳಾಟ ನಡೆಸಿದರು.
ಪರಿಸ್ಥಿತಿ ಕೈ ಮೀರಿರುವುದನ್ನು ಅರಿತ ಪೊಲೀಸರು ಒಂದಷ್ಟು ಜನರನ್ನು ಹಿಡಿದು ಠಾಣೆಗೆ ತಂದರು. ಗಲಾಟೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಕಾಲು ಮುರಿದ ಬಗ್ಗೆ ಸುದ್ದಿಯಿದೆ. ಆದರೆ, ಖಚಿತವಾಗಿಲ್ಲ. ಈ ನಡುವೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ನೂರಾರು ಜನ ಜಮಾಯಿಸಿದರು. ಈ ವೇಳೆ ಸಾಕಷ್ಟು ಗೊಂದಲದ ವಾತಾವರಣ, ಮಾತಿನ ಚಕಮಕಿ ನಡೆಯಿತು. ಕೆಲವರು ಪೊಲೀಸರಿಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಶನಿವಾರ ಸಂಜೆ 5 ಗಂಟೆಯಿoದ ರಾತ್ರಿ 10 ಗಂಟೆಯವರೆಗೂ ಯಲ್ಲಾಪುರ ಪೊಲೀಸ್ ಠಾಣೆ ಹಾಗೂ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ ಜಮಾಯಿಸಿದ್ದರು. ಹೊಡೆದಾಟ ಪ್ರಕರಣದಲ್ಲಿ ರಾಜಕೀಯ ದುರಿಣರು-ಪ್ರಭಾವಿಗಳ ಹೆಸರು ಕೇಳಿಬಂದಿದ್ದು, ಕೊನೆಗೆ ರಾಜಿಸೂತ್ರಕ್ಕೆ ಎಲ್ಲರೂ ಒಪ್ಪಿದರು. `ಶಾಂತಿ ಕಾಪಾಡೋಣ’ ಎಂಬ ಸಲಹೆ ನೀಡಿ, ಶಾಸಕ ಶಿವರಾಮ ಹೆಬ್ಬಾರ್ ಈ ಪ್ರಕರಣದ ಮದ್ಯಸ್ಥಿಕೆವಹಿಸಿದರು. ತಡರಾತ್ರಿಯ ವೇಳೆ ಶಾಸಕ ಶಿವರಾಮ ಹೆಬ್ಬಾರ್ ಆಗಮಿಸಿ ರಾಜಿ ಮಾಡಿಸಿದರು. ಅದಾದ ನಂತರವೂ `ಪೊಲೀಸರಿಗೆ ಧಿಕ್ಕಾರ.. ಶಿವರಾಮ ಹೆಬ್ಬಾರ್’ಗೆ ಜೈಕಾರ’ ಎಂಬ ಧ್ವನಿ ಕೇಳಿಸಿತು.
`ಪೊಲೀಸರು ಯಾರಿಗೂ ಹೊಡೆದಿಲ್ಲ. ಪೊಲೀಸರ ಮೇಲೆಯೂ ಹಲ್ಲೆ ನಡೆದಿಲ್ಲ’ ಎಂದು ಪೊಲೀಸ್ ಮೂಲಗಳು ಸ್ಪಷ್ಠನೆ ನೀಡಿವೆ. `ಸಣ್ಣ ಪ್ರಮಾಣದ ಗಲಾಟೆ ನಡೆದಿದ್ದು, ಅದು ಬಗೆಹರಿದಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.