ಕೂಲಿ ಕೆಲಸ ಮಾಡಿಕೊಂಡಿದ್ದ ರಾಜಅಲಿ ಸಾಬ್ ಅವರ ಪತ್ನಿ ರಮಿಸಾ ಪರ ಪುರುಷರ ಜೊತೆ ಮನೆಯಲ್ಲಿದ್ದಾಗ ರಾಜಅಲಿ ಸಾಬ್ ಅದನ್ನು ಪತ್ತೆ ಮಾಡಿದ್ದಾರೆ. ಕೂಡಲೇ ಮನೆಗೆ ಬೀಗ ಹಾಕಿದ ಕಾರಣ ಅವರ ಸಹೋದರರೇ ರಾಜಅಲಿ ಸಾಬ್ ಮೇಲೆ ಕೈ ಮಾಡಿದ್ದಾರೆ.
ಹಳಿಯಾಳದ ರಾಜಅಲಿ ಸಾಬ್ ಅವರು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಪತ್ನಿ ರಮಿಸಾ ಹಾಗೂ ಮಕ್ಕಳಾದ ರಿಜ್ವಾನ್, ತೋಹಮಾನದ್ (ಎಲ್ಲರ ಹೆಸರು ಬದಲಿಸಿದೆ) ಎಲ್ಲರೂ ಕೂಡಿ ಬದುಕು ಕಟ್ಟಿಕೊಂಡಿದ್ದಾರೆ.
ಮಾರ್ಚ 13ರ ನಸುಕಿನಲ್ಲಿ ಮನೆಗೆ ಬಂದ ರಾಜಅಲಿ ಸಾಬ್ ಅವರಿಗೆ ಮನೆಯೊಳಗೆ ಬೇರೆ ಯಾರೋ ಇರುವುದು ಅರಿವಿಗೆ ಬಂದಿದೆ. ಕೂಡಲೇ ಅವರು ಹೊರಗಡೆಯಿಂದ ಮನೆ ಬಾಗಿಲು ಹಾಕಿದ್ದಾರೆ. ಜೊತೆಗೆ ಬೀಗವನ್ನು ಜಡಿದಿದ್ದಾರೆ. ಈ ವಿಷಯವಾಗಿ ರಾಜಅಲಿ ಸಾಬ್ ಅವರ ಜೊತೆ ತಮ್ಮಂದಿರಾದ ಮಹಿದ್ ಜಾಂಗಳೆ ಹಾಗೂ ಅಮಾನ್‌ಸಾಬ್ ಜಾಂಗಳೆ ಜಗಳ ಮಾಡಿದ್ದಾರೆ.
`ಆ ರೀತಿ ಹೊರಗಡೆಯಿಂದ ಬೀಗ ಹಾಕಿದ್ದು ತಪ್ಪು’ ಎಂದು ಆ ಇಬ್ಬರು ಸಹೋದರರು ವಾದಿಸಿದ್ದಾರೆ. ಚಾವಿ ಹಾಕಿದಕ್ಕಾಗಿ ಆಕ್ರೋಶವ್ಯಕ್ತಪಡಿಸಿ ರಾಜಅಲಿ ಸಾಬ್ ಅವರ ಮೇಲೆ ಕೈ ಮಾಡಿದ್ದಾರೆ. ಈ ವಿಷಯವಾಗಿ ನೊಂದ ರಾಜಅಲಿ ಸಾಬ್ ಅದೇ ದಿನ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಎದುರಾಳಿಗಳನ್ನು ಕರೆದು ಬುದ್ದಿಮಾತು ಹೇಳಿ ಬಿಟ್ಟು ಕಳುಹಿಸಿದರೂ, ರಾಜಅಲಿ ಸಾಬ್ ಅವರಿಗೆ ಸಮಾಧಾನವಾಗಿಲ್ಲ.
ಹೀಗಾಗಿ ನ್ಯಾಯಾಲಯದ ಮೊರೆಹೋದ ರಾಜಅಲಿ ಸಾಬ್ ಸಹೋದರರ ವಿರುದ್ಧ ದೂರು ನೀಡಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.







