ಅಣ್ಣನಿ0ದಲೇ ಅತ್ಯಾಚಾರಕ್ಕೆ ಒಳಗಾಗಿ ಬಾಣಂತಿಯಾಗಿದ್ದ ಯಲ್ಲಾಪುರದ ವಿದ್ಯಾರ್ಥಿನಿ SSLC ಪರೀಕ್ಷೆ ಎದುರಿಸಿದ್ದಾರೆ. ಪಾಲಕರ ಧೈರ್ಯ, ಶಿಕ್ಷಕರ ಪ್ರೋತ್ಸಾಹದಿಂದ ಅವರು ಪರೀಕ್ಷೆ ಬರೆದಿದ್ದಾರೆ.
ಸದ್ಯ ಆ ವಿದ್ಯಾರ್ಥಿನಿಯ ಆರೋಗ್ಯ ಸ್ಥಿರವಾಗಿದೆ. ಮಗುವಿನ ಆರೋಗ್ಯ ಗಂಭೀರವಾಗಿದ್ದು, ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಈ ಪ್ರಕರಣದ ಆರೋಪಿ ಜಾಮೀನಿನ ಮೇಲೆ ಹೊರ ಬಂದರೂ ಪ್ರಕರಣದ ವಿಚಾರಣೆ ಮುಂದುವರೆದಿದೆ. 2025ರ ಮಾರ್ಚ 4ರಂದು ಈ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ಬರೆದಿದ್ದರು. ಮಾರ್ಚ 5ರಂದು ಹೊಟ್ಟೆ ನೋವು ಎಂದು ಯಲ್ಲಾಪುರ ಆಸ್ಪತ್ರೆಗೆ ಬಂದಾಗ ಹೆಣ್ಣು ಮಗು ಜನನವಾಗಿತ್ತು. ಅವಧಿ ಪೂರ್ವ ಶಿಶು ಹುಟ್ಟಿದ್ದರಿಂದ ಮಗುವಿನ ತೂಕ ತೀರಾ ಕಡಿಮೆಯಿತ್ತು. ಹೀಗಾಗಿ ಅದೇ ದಿನ ಮಗುವನ್ನು ಕಾರವಾರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ನಿರಂತರವಾಗಿದೆ.
ಮು0ಡಗೋಡಿನಲ್ಲಿರುವ ಆ ವಿದ್ಯಾರ್ಥಿನಿಯ ಅಣ್ಣ ಗಿರೀಶ್ (19) ಅತ್ಯಾಚಾರ ನಡೆಸಿರುವುದು ಆಪ್ತ ಸಮಾಲೋಚನೆ ಮೂಲಕ ಬೆಳಕಿಗೆ ಬಂದಿತ್ತು. ಈ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಲೈಂಗಿಕವಾಗಿ ಬಳಸಿಕೊಂಡ ಆರೋಪಿ, ಸಂತ್ರಸ್ತೆಯನ್ನು ಬೆದರಿಸಿದ ಕಾರಣ ಮಗು ಹುಟ್ಟುವವರೆಗೂ ಈ ವಿಷಯ ಹೊರಗೆ ಬಂದಿರಲಿಲ್ಲ. ಎರಡು ತಿಂಗಳ ಹಿಂದೆ ಆರೋಗ್ಯ ಇಲಾಖೆಯವರು ಶಾಲಾ-ಕಾಲೇಜು ಭೇಟಿ ನಡೆಸಿದಾಗಲೂ ವಿದ್ಯಾರ್ಥಿನಿ ಸ್ಪಷ್ಟ ಮಾಹಿತಿ ಕೊಟ್ಟಿರಲಿಲ್ಲ.
ಪರೀಕ್ಷೆಗೆ ಹಾಜರಾಗದೇ ಇದ್ದರೆ ವರ್ಷವಿಡೀ ಓದಿದ ಶ್ರಮ ಹಾಳಾಗುತ್ತದೆ ಎಂದು ಆ ವಿದ್ಯಾರ್ಥಿನಿ ಪಾಲಕರಿಗೆ ಮನವರಿಕೆ ಮಾಡಿದ್ದು, ಪಾಲಕರು ಪರೀಕ್ಷೆ ಬರೆಯಲು ಒಪ್ಪಿಗೆ ಸೂಚಿಸಿದರು. ಆ ವಿದ್ಯಾರ್ಥಿನಿಗೆ ಪಾಠ ಮಾಡಿದ್ದ ಶಿಕ್ಷಕರು ಸಹ ಧೈರ್ಯವಾಗಿ ಪರೀಕ್ಷೆ ಎದುರಿಸುವಂತೆ ಉತ್ತೇಜಿಸಿದರು. ಹೀಗಾಗಿ ಮೂರು ತಾಸುಗಳ ಕಾಲ ನಡೆಯುವ ಪರೀಕ್ಷೆಯನ್ನು ಸಹಜವಾಗಿ ಆ ವಿದ್ಯಾರ್ಥಿನಿ ಎದುರಿಸಿದರು.
ಇದನ್ನು ಓದಿ: ಅಣ್ಣ ಮಾಡಿದ ಅವಾಂತರ: ಎಸ್‌ಎಸ್‌ಎಲ್‌ಸಿ ಬಾಲಕಿಗೆ ಹೆಣ್ಣು ಮಗು!
ಇನ್ನೂ ಯಲ್ಲಾಪುರದ ಆರು ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ಹಿತದೃಷ್ಠಿಯಿಂದ ಕುಡಿಯುವ ನೀರು, ಒಆರ್‌ಎಸ್ ಒದಗಿಸಲಾಗಿದೆ. ಪೊಲೀಸ್, ತಪಾಸಣಾ ಅಧಿಕಾರಿಗಳ ಜೊತೆ ಆರೋಗ್ಯ ಸಿಬ್ಬಂದಿ ಸಹ ಪರೀಕ್ಷಾ ಕೇಂದ್ರದಲ್ಲಿದ್ದು ಸೇವೆ ಒದಗಿಸುತ್ತಿದ್ದಾರೆ. ವಿವಿಧ ಹಂತದ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.