ಕುಮಟಾ ಮೀನು ಮಾರುಕಟ್ಟೆಗೆ ಪುರಸಭೆ ಫ್ಯಾನ್ ಅಳವಡಿಸಿದೆ. ಆದರೆ, ಅಲ್ಲಿನ ಫ್ಯಾನ್ ಎಂದಿಗೂ ಕೆಲಸ ಮಾಡಿದನ್ನು ನೋಡಿದವರಿಲ್ಲ!
ಸುಮಾರು 10 ವರ್ಷದ ಹಿಂದೆ ಹಳೆ ಮೀನು ಮಾರುಕಟ್ಟೆಗೆ ಹೊಂದಿಕೊoಡು ಇಲ್ಲಿ ಹೊಸ ಮೀನು ಮಾರುಕಟ್ಟೆ ಕಟ್ಟಲಾಗಿದೆ. ಆ ಕಟ್ಟಡಕ್ಕೆ ಅಗತ್ಯವಿರುವ ಫ್ಯಾನುಗಳನ್ನು ಸಹ ಅಳವಡಿಸಲಾಗಿದ್ದು, ಹಾಳಾದ ಫ್ಯಾನುಗಳನ್ನು ರಿಪೇರಿಗೆ ಒಯ್ದವರು ಮರಳಿ ಅಳವಡಿಸಿಲ್ಲ. ಅಲ್ಲಿಯೇ ಇರುವ ಫ್ಯಾನುಗಳು ಸದ್ಯ ತಿರುಗುವ ಪರಿಸ್ಥಿತಿಯಲ್ಲಿಲ್ಲ.
ಮಾರ್ಚ ನಂತರ ಮೀನು ಮಾರುಕಟ್ಟೆ ಒಳಭಾಗದಲ್ಲಿ ಸಾಕಷ್ಟು ಸೆಖೆಯಾಗುತ್ತದೆ. ಇದರಿಂದ ಮೀನು ಮಾರಾಟಗಾರರು ಕಟ್ಟಡದ ಒಳಗೆ ಮೀನು ಮಾರಾಟ ನಡೆಸದೇ ಬೀದಿಯಲ್ಲಿ ಮೀನು ಮಾರುವ ಉದಾಹರಣೆಗಳಿವೆ. ಗ್ರಾಹಕರು ಸಹ ಬೀದಿಯಲ್ಲಿ ಮಾರುವ ಮೀನುಗಳನ್ನು ಪೈಪೋಟಿಗೆ ಬಿದ್ದು ಖರೀದಿಸುತ್ತಾರೆ. ಹೀಗಾಗಿ ಸುಸಜ್ಜಿತ ಮೀನು ಮಾರುಕಟ್ಟೆಯಿದ್ದರೂ ಸೌಲಭ್ಯ ಕೊರತೆಯಿಂದ ಅದು ಮೀನು ಮಾರಾಟ ಮಹಿಳೆಯರ ಬಳಕೆಗೆ ಸಿಗುತ್ತಿಲ್ಲ.
ಮಾರ್ಚ 25ರಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಮೀನು ಮಾರುಕಟ್ಟೆಗೆ ಹೋಗಿದ್ದರು. ಆ ವೇಳೆ ಅಲ್ಲಿದ್ದ ಮಹಿಳೆಯರು ತಾವು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಸರ್ಕಾರಿ ವೆಚ್ಚದಲ್ಲಿ ಅಳವಡಿಸಿದ ಫ್ಯಾನುಗಳು ತಿರುಗದೇ ಇರುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕೆಲವಡೆ ಫ್ಯಾನ್ ಇಲ್ಲದಿರುವ ಬಗ್ಗೆಯೂ ಗಮನ ಸೆಳೆದರು.
ಪುರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಿರುವ ಬಗ್ಗೆ ದೂರಿದರು. ಹೀಗಾಗಿ ಆಗ್ನೇಲ್ ರೋಡ್ರಿಗಸ್ ಅವರು ಫ್ಯಾನ್ ಅಳವಡಿಕೆ ವಿಷಯವಾಗಿ ಜಿಲ್ಲಾಡಳಿತದ ಗಮನ ಸೆಳೆದರು. ಈ ಬಗ್ಗೆ ವಾಟ್ಸಪ್ ದೂರು ವಿಭಾಗದ ಮೂಲಕ ಫೋಟೋ, ವಿಡಿಯೋ ದಾಖಲೆ ಜೊತೆ ಅವರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರು. ತೆರಿಗೆ ಪಾವತಿದಾರರಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ಅವರು ಆಗ್ರಹಿಸಿದರು.