ಕಾರವಾರದ ಸದಾಶಿವಗಡದ ಚಾಲಕ ಸ್ಟವಿ ಗುಡಿನೋ ಮನೆಯಲ್ಲಿ ಕಳ್ಳತನ ನಡೆದಿದೆ. ಆರುವರೆ ಲಕ್ಷ ರೂ ಮೌಲ್ಯದ ಬಂಗಾರದ ಜೊತೆ ಚಾಲಕ ಬಳಸುತ್ತಿದ್ದ ಚಡ್ಡಿಯನ್ನು ಸಹ ಕಳ್ಳರು ಅಪಹರಿಸಿದ್ದಾರೆ. ಕಳ್ಳತನ ನಡೆಯುವ ವೇಳೆ ಕುಟುಂಬದವರೆಲ್ಲರೂ ಮನೆಯಲ್ಲಿಯೇ ಇದ್ದರೂ ಕಳ್ಳರು ಬಂದಿರುವುದು ಯಾರಿಗೂ ಗೊತ್ತಾಗಿಲ್ಲ!
ಸದಾಶಿವಗಡ ಸ್ಟವಿ ಗುಡಿನೋ ಅವರು ಗೋಸಾವಿವಾಡದ ವೆಲಂಕಣಿ ವಿಲ್ಲಾದಲ್ಲಿ ವಾಸವಾಗಿದ್ದಾರೆ. ಟಾಕ್ಸಿ ಚಾಲಕರಾದ ಅವರು ತಮ್ಮ ದುಡಿಮೆಯ ಹಣದಿಂದ ಒಂದಷ್ಟು ಚಿನ್ನಾಭರಣ ಮಾಡಿಸಿಕೊಂಡಿದ್ದರು. ಚಿನ್ನದ ನೆಕ್ಲೇಸ್, ಮಂಗಳಸೂತ್ರ, ಬಳೆ, ಉಂಗುರ, ಲಾಕೇಟ್ ಇದ್ದ ಚೈನ್, 3 ಸಾವಿರ ರೂ ಹಣ ಹಾಗೂ ಮೊಬೈಲನ್ನು ಕಳ್ಳರು ದೋಚಿದ್ದಾರೆ.
ಮಾರ್ಚ 23ರ ರಾತ್ರಿ ಕುಟುಂಬದ ಸದಸ್ಯರೆಲ್ಲರೂ ಊಟ ಮಾಡಿದ ನಂತರ ಮನೆಯ ಮೊದಲ ಮಹಡಿಗೆ ತೆರಳಿದ್ದರು. ಎಲ್ಲರೂ ಅಲ್ಲಿಯೇ ನಿದ್ರಿಸಿದ್ದರು. ಮನೆ ಮೇಲೆ ಹೋಗುವ ಮುನ್ನ ಮನೆಯ ಬಾಗಿಲನ್ನು ಭದ್ರಪಡಿಸಿದ್ದರು. ಅದಾಗಿಯೂ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ.
ಮನೆ ಬೀಗ ಮುರಿದು, ಕಪಾಟು ಒಡೆದು ಕಳ್ಳತನ ಮಾಡಿದ್ದಾರೆ. ಎಟಿಎಂ ಕಾರ್ಡು, ಆಧಾರ್ ಕಾರ್ಡು, ಪಾನ್ ಕಾರ್ಡ ಜೊತೆ ಕ್ರೀಂ ಬಣ್ಣದ ಪ್ಯಾಂಟು-ಚಡ್ಡಿಯನ್ನು ಕಳ್ಳರು ಬಿಟ್ಟಿಲ್ಲ. ಈ ಬಗ್ಗೆ ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.