ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಸಿದ್ದಾಪುರದ ಲುಕ್‌ಮನ್ ಗೌಸ್ ಸಾವನಪ್ಪಿದ್ದಾರೆ. ಗಾಯಗೊಂಡ ಅವರನ್ನು ಬದುಕಿಸುವುದಕ್ಕಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
ಸಿದ್ದಾಪುರದ ಹೇರೂರು ಅಂಡಲೇಬೈಲಿನ ಲುಕ್‌ಮನ್ ಗೌಸ್ (45) ಚಾಲಕರಾಗಿದ್ದರು. ಮಾರ್ಚ 24ರಂದು ಅವರು ವೇಗವಾಗಿ ಇಕೋ ವಾಹನ ಓಡಿಸಿಕೊಂಡು ಹೊರಟಿದ್ದರು. ಶಿರಸಿ-ಕುಮಟಾ ರಸ್ತೆಯಲ್ಲಿ ಸಂಚರಿಸಿದ ಅವರು ಕತಗಾಲಿನ ಕಪ್ಪೆಗುಳಿ ರಸ್ತೆ ತಿರುವಿನಲ್ಲಿ ಸಹ ವಾಹನದ ವೇಗ ತಗ್ಗಿಸಲಿಲ್ಲ.
ಪರಿಣಾಮ ಲುಕ್‌ಮನ್ ಎದುರಿನಿಂದ ಬರುತ್ತಿದ್ದ ಇನೋವಾ ಕಾರಿಗೆ ತಮ್ಮ ಇಕೋ ಕಾರನ್ನು ಗುದ್ದಿದರು. ಅಪಘಾತದ ರಭಸಕ್ಕೆ ಎರಡು ಕಾರುಗಳು ಜಖಂ ಆದವು. ಜೊತೆಗೆ ಇಕೋ ಕಾರಿನಲ್ಲಿದ್ದ ಲುಕ್‌ಮನ್ ಗೌಸ್ ಎರಡು ಕಾಲು ಮುರಿದುಕೊಂಡರು. ಇನ್ನಿತರ ಕಡೆಗಳಲ್ಲಿಯೂ ಗಾಯ ಮಾಡಿಕೊಂಡರು.
ಮೊದಲು ಅವರನ್ನು ಕುಮಟಾ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹುಬ್ಬಳ್ಳಿಯ ಕೆಎಂಸಿಗೆ ಕರೆದೊಯ್ಯಲಾಯಿತು. ಆದರೆ, ಪ್ರಯೋಜನವಾಗಲಿಲ್ಲ. ಅದೇ ದಿನ ರಾತ್ರಿ ಅವರು ಸಾವನಪ್ಪಿದರು.






