ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವರ್ತನೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಬಿಜೆಪಿಗರು ಪ್ರತಿಭಟನೆ ನಡೆಸಿದ್ದಾರೆ. ಡಿ ಕೆ ಶಿವಕುಮಾರ ಅವರ ಫೋಟೋ-ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಕಾರವಾರದಲ್ಲಿ ರಾಜ್ಯ ಸರ್ಕಾರದ ದಮನಕಾರಿ ನೀತಿ ವಿರೋಧಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಭಾಷಣ ಮಾಡಿದರು. ಶಿವಾಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಮುಂಡಗೋಡು, ಯಲ್ಲಾಪುರ ಸೇರಿ ವಿವಿಧ ಭಾಗದಲ್ಲಿ ಮಂಗಳವಾರ ಬಿಜೆಪಿಗರು ಪ್ರತಿಭಟಿಸಿದರು. ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ಶೇ 4ರ ಮೀಸಲಾತಿ ನೀಡುವುದನ್ನು ವಿರೋಧಿಸಿದರು.
`ಸಂವಿಧಾನ ಬದಲಾವಣೆ ಮಾಡಿ ಮೀಸಲಾತಿ ಕೊಡುವುದು ಖಂಡನೀಯ’ ಎಂದು ಮುಂಡಗೋಡಿನ ಪ್ರತಿಭಟನಾಕಾರರು ಹೇಳಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ್, ಪ್ರಮುಖರಾದ ಎಲ್ ಟಿ ಪಾಟೀಲ್, ಸಂತೋಷ ತಳವಾರ್ ಘೋಷಣೆ ಕೂಗಿದರು
ಯಲ್ಲಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಮುಖ್ಯ ಭಾಷಣ ಮಾಡಿದರು. `ಸದಾ ಹಿಂಬಾಗಲಿನ ಮೂಲಕ ರಾಜಕಾರಣ ಮಾಡುವ ಕಾಂಗ್ರೆಸ್ ಸಂವಿಧಾನ ಬದಲಿಸುವ ಮಾತನಾಡಿದೆ. ದಲಿತರ ಪರ ಎಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್ ದಲಿತ ವಿರೋಧಿಯಾಗಿದೆ’ ಎಂದರು. ಡಿಕೆ ಶಿವಕುಮಾರ ಅವರ ಪ್ರತಿಕೃತಿಗೆ ಪೆಟ್ರೋಲ್ ಹಾಕಿ ಸುಟ್ಟರು.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್, ಪ್ರಮುಖರಾದ ವೆಂಕಟ್ರಮಣ ಬೆಳ್ಳಿ, ರಜತ್ ಬದ್ದಿ, ವಿಠ್ಠು ಶೆಳಕೆ, ಆದಿತ್ಯ ಗುಡಿಗಾರ, ಗಜಾನನ ನಾಯ್ಕ ತಳ್ಳೀಗೆರೆ, ರಾಮಚಂದ್ರ ಚಿಕ್ಯಾನಮನೆ, ಸೋಮೇಶ್ವರ ನಾಯ್ಕ, ರವಿ ದೇವಾಡಿಗ, ವಿನೋದ ತಳೇಕರ, ಪ್ರದೀಪ ಗುಡಿಗಾರ, ಗಣಪತಿ ಬೋಳಗುಡ್ಡೆ, ಹರಿಪ್ರಕಾಶ ಕೋಣೇಮನೆ ಸೇರಿ ಡಿಕೆ ಶಿವಕುಮಾರ್ ವಿರುದ್ಧ ದಿಕ್ಕಾರ ಕೂಗಿದರು.