ಬಿಜೆಪಿ ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗಪಡಿಸಿದ ಕಾರಣ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ನೋಟಿಸ್ ನೀಡಿದೆ. ಮಂಗಳವಾರ ಈ ನೋಟಿಸ್ ಜಾರಿಯಾಗಿದ್ದು, 74 ಗಂಟೆ ಒಳಗೆ ಉತ್ತರಿಸಲು ಸೂಚಿಸಿದೆ.
ಪಕ್ಷದ ಶಿಸ್ತು ಉಲ್ಲಂಘನೆ ಆರೋಪ ನೋಟಿಸ್’ನಲ್ಲಿದೆ. ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಸದಸ್ಯ ಓಂ ಪಾಠಕ್ ನೋಟಿಸ್ ಜಾರಿ ಮಾಡಿದ್ದಾರೆ. `ಕಾಲಮಿತಿಯೊಳಗೆ ಉತ್ತರಿಸದೇ ಇದ್ದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ’ ಎಂದು ನೋಟಿಸ್ಸಿನಲ್ಲಿ ಬರೆಯಲಾಗಿದೆ. `ರಾಜಕೀಯ ಪಕ್ಷದಲ್ಲಿನ ಅಶಿಸ್ತಿಗೆ ಆಗಾಗ ಔಷಧಿ ಕೊಡಬೇಕು. ಬಿಜೆಪಿಯಲ್ಲಿ ಔಷಧಿ ಕೊಡುವ ಅವಧಿ ಮುಗಿದಿದೆ. ಇಡೀ ಪಕ್ಷ ಅಶಿಸ್ತಿನಿಂದ ಕೂಡಿದೆ. ಬಿಜೆಪಿ ಪಕ್ಷವಾಗಿ ಉಳಿದಿಲ್ಲ. ಅಲ್ಲಿ ನಾಯಕರು ಇಲ್ಲ’ ಎಂದು ಶಿವರಾಮ ಹೆಬ್ಬಾರ್ ಹೇಳಿದ್ದರು. ಈ ಹೇಳಿಕೆಯನ್ನು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿದೆ.
ಬುಧವಾರ ಗೃಹ ಸಚಿವ ಜಿ ಪರಮೇಶ್ವರ್ ಅವರ ಜೊತೆ ಶಿವರಾಮ ಹೆಬ್ಬಾರ್ ಕಾಣಿಸಿಕೊಂಡರು. ಮಾಧ್ಯಮದ ಜೊತೆ ಮಾತನಾಡಿ `ನನಗೆ ಇನ್ನೂ ನೋಟಿಸ್ ತಲುಪಿಲ್ಲ. ನೋಟಿಸ್ ತಲುಪಿದ ನಂತರ ಸಕಾಲದಲ್ಲಿ ಸಮರ್ಥವಾಗಿ ಉತ್ತರಿಸುತ್ತೇನೆ. ನಾನು ಯಾವುದೇ ಅಪರಾಧ ಮಾಡಿಲ್ಲ. ನನಗೆ ಆದ ನೋವುಗಳ ಬಗ್ಗೆ ಪತ್ರದ ಮೂಲಕ ತಿಳಿಸುವೆ’ ಎಂದು ಹೇಳಿದರು.
`ಯಾರು ಪ್ರಚೋದನೆ ಕೊಟ್ಟರೋ ಅವರಿಗೆ ಏನು ಮಾಡಿಲ್ಲ. ಪಕ್ಷದ ಮಹಾನಾಯಕರಿಗೆ ಬೈದವರಿಗೆ ಏನೂ ಆಗಿಲ್ಲ’ ಎಂದು ಅಸಮಧಾನವನ್ನು ಅವರು ವ್ಯಕ್ತಪಡಿಸಿದರು. ಕೊನೆಗೆ `ಬಿಜೆಪಿಯಲ್ಲಿ ಜೈ ಹಾಕುವವನೇ ಬೇರೆ.. ಜಿಲೆಬಿ ತಿನ್ನುವವನೇ ಬೇರೆ… ಜೈಲಿಗೆ ಹೋಗುವವನೇ ಬೇರೆ… ಈ ವಾಸ್ತವ ಎಲ್ಲರಿಗೂ ಗೊತ್ತಿದೆ’ ಎಂದು ಮಾತು ಮುಗಿಸಿದರು.