ಯಲ್ಲಾಪುರದಲ್ಲಿ ಈ ಬಾರಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಯುಗಾದಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ ಮುಂದಾಳತ್ವದಲ್ಲಿ ಐದು ದಿನಗಳ ಕಾಲ ಕಾರ್ಯಕ್ರಮ ಆಚರಣೆಗೆ ಸಿದ್ಧತೆ ನಡೆದಿದೆ.
ಮಾರ್ಚ್ 27ರಂದು ಸಂಜೆ 4.15ರಿಂದ ಯುಗಾದಿ ಉತ್ಸವದ ಜಾಗೃತಿ ಜಾಥಾ ಕಾಳಮ್ಮನಗರದ ಕಾಳಮ್ಮಾದೇವಿ ದೇವಸ್ಥಾನದಿಂದ ಸಂಚರಿಸಲಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಲಿದೆ. ಮಾರ್ಚ್ 30ರಂದು ಮಧ್ಯಾಹ್ನ 3.15ರಿಂದ ಕೋಟೆ ಕರಿಯಮ್ಮಾ ದೇವಸ್ಥಾನದಿಂದ ಭವ್ಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಭಜನಾ ಕುಣಿತ, ವಿವಿಧ ರೀತಿಯ ಟ್ಯಾಬ್ಲೊ ಹಾಗೂ ವಾದ್ಯ ತಂಡಗಳು ಭಾಗವಹಿಸಲಿವೆ. ಈ ವೇಳೆ ಗೋಪಾಲಕೃಷ್ಣ ಭಟ್ ಹಂಡ್ರಮನೆ ಅವರು ಪಂಚಾoಗ ಪಠಣ ಮಾಡಲಿದ್ದಾರೆ.
ಮಾರ್ಚ 31ರಂದು ಸಂಜೆ 5 ಗಂಟೆಗೆ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಸುಮಾ ತೊಂಡೆಕೆರೆ ಶಿಷ್ಯವೃಂದದವರಿoದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಏಪ್ರಿಲ್ 1ರಂದು ಗಾಂಧಿ ಕುಟೀರ ಆವಾರದಲ್ಲಿ ಸಾಂಪ್ರದಾಯಿಕ ಚುಕ್ಕಿ ರಂಗೋಲಿ ಸ್ಪರ್ಧೆ ನಡೆಯಲಿದೆ. ಏಪ್ರಿಲ್ 4ರಂದು ಸಂಜೆ 4 ಗಂಟೆಗೆ ಸಿದ್ದಾಪುರ ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮಿಗಳ ಉಪಸ್ಥಿತಿಯಲ್ಲಿ ಹಿಂದೂ ಸಮಾವೇಶ ನಡೆಯಲಿದೆ.
ಏಪ್ರಿಲ್ 4ರಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ. ನೆರೆದಿರುವ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ ಬುಧವಾರ ಮಾಹಿತಿ ನೀಡಿದರು. ಪ್ರಮುಖರಾದ ಶಾಮಿಲಿ ಪಾಟಣಕರ, ನಮಿತಾ ಬೀಡಿಕರ, ಸಿದ್ದಾರ್ಥ ನಂದೊಳ್ಳಿಮಠ, ಶ್ರೀನಿವಾಸ ಗಾಂವ್ಕರ, ಪ್ರದೀಪ ಯಲ್ಲಾಪುರಕರ, ಸುರೇಶ ಹೆಗಡೆ, ಸೋಮೇಶ್ವರ ನಾಯ್ಕ, ಕೇಶವ ಗಾಂವ್ಕರ ಇದ್ದರು. ಯುಗಾದಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಅವರು ಈ ವೇಳೆ ಬಿಡುಗಡೆ ಮಾಡಿದರು.