ಭಟ್ಕಳದಿಂದ ಮೀನುಗಾರಿಕೆಗೆ ತೆರಳಿದ್ದ ಛತ್ತಿಸಘಡದ ಮೀನುಗಾರರೊಬ್ಬರು ಅರಬ್ಬಿ ಸಮುದ್ರದಲ್ಲಿ ಬಿದ್ದು ಸಾವನಪ್ಪಿದ್ದಾರೆ.
36 ವರ್ಷದ ಸಂದೀಪ ಸಾಯ್ ಭಟ್ಕಳದ ಮಾವಿನಕೂರ್ವೆ ಬಂದರಿನ ಮೂಲಕ ಮೀನುಗಾರಿಕೆಗೆ ಹೋಗಿದ್ದರು. ಸಾಗರ ಶ್ರೀ ಎಂಬ ಬೋಟಿನಲ್ಲಿ ಅವರು ಸಂಚರಿಸುತ್ತಿದ್ದರು. ಮಾರ್ಚ 27ರ ನಸುಕಿನ 1 ಗಂಟೆಗೆ ಅವರು ಕಾಲು ಜಾರಿ ಅರಬ್ಬಿ ಸಮುದ್ರಕ್ಕೆ ಬಿದ್ದರು.
ಸಮುದ್ರಕ್ಕೆ ಬಿದ್ದ ಅವರು ಮೇಲೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಚಲಿಸುತ್ತಿದ್ದ ಬೋಟಿನ ಸಂಪರ್ಕವನ್ನು ಕಳೆದುಕೊಂಡರು. ಬೆಳಗ್ಗೆ 11 ಗಂಟೆ ವೇಳೆಗೆ ಮಾವಿನಕೂರ್ವಾ ಬಂದರು ಬಳಿ ಸಂದೀಪ ಸಾಯ್ ಅವರ ಶವ ಕಾಣಿಸಿತು.
ಅವರ ಜೊತೆಗಾರ ಸಂಗೀತಕುಮಾರ ಶವದ ಗುರುತು ಹಿಡಿದರು. ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದರು. ಸಂಗೀತಕುಮಾರ ನೀಡಿದ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದರು.