ಬಡವರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಪೂರೈಸುವ ಅಕ್ಕಿಯಲ್ಲಿ ಕಲ್ಲು, ಮಣ್ಣು ಹಾಗೂ ಧೂಳು ಹೆಚ್ಚಾಗಿದೆ. ಶಿರಸಿ ಗಣೇಶನಗರದ ಪಡಿತರ ಅಂಗಡಿಯಲ್ಲಿ ಅಕ್ಕಿಪಡೆದವರು ಇದರಿಂದ ಕಂಗಾಲಾಗಿದ್ದಾರೆ.
ಪದ್ಮ ಚಂದ್ರ ಮೊಗೇರ್ ಸರ್ಕಾರ ನೀಡುವ ಉಚಿತ ಅಕ್ಕಿ ಪಡೆದಿದ್ದರು. ಆದರೆ, ಅಕ್ಕಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲುಗಳಿರುವುದನ್ನು ಅವರು ಗಮನಿಸಿದರು. ಕಲ್ಲಿನ ಜೊತೆ ಧೂಳು, ಮಣ್ಣುಗಳ ಮಿಶ್ರಣವೂ ಇದ್ದಿದ್ದರಿಂದ ಅದು ಸೇವನೆಗೆ ಯೋಗ್ಯವಾಗಿರಲಿಲ್ಲ.
ಪದ್ಮ ಮೊಗೇರ್ ಅವರಿಗೆ 60 ಕೆಜಿ ಅಕ್ಕಿ ಬರಬೇಕಿತ್ತು. ಪಡಿತರ ವಿತರಕರು ಅವರಿಗೆ 10 ಕೆಜಿ ಅಕ್ಕಿಯನ್ನು ಪ್ರತ್ಯೇಕವಾಗಿ ಕಟ್ಟಿ ಕೊಟ್ಟಿದ್ದರು. ಉಳಿದ 50 ಕೆಜಿಯ ಅಕ್ಕಿಯ ಬ್ಯಾಗ್ ವಿತರಿಸಿದ್ದರು. ಆ ಪೈಕಿ 10 ಕೆಜಿ ಅಕ್ಕಿ ಗುಣಮಟ್ಟದಿಂದ ಕೂಡಿದ್ದು, ಬಳಕೆಗೆ ಯೋಗ್ಯವಾಗಿದೆ. ಆದರೆ, ಉಳಿದ 50 ಕೆಜಿಯ ಚೀಲದ ಅಕ್ಕಿ ಬಳಸಿದವರು ಆಸ್ಪತ್ರೆ ಸೇರುವುದು ನಿಶ್ಚಿತ ಎಂದು ಅವರ ಕುಟುಂಬದವರು ದೂರಿದರು.
`ಮೊದಲು ಕೊಟ್ಟ 10 ಕೆಜಿ ಅಕ್ಕಿ ಗುಣಮಟ್ಟದಿಂದ ಕೂಡಿರುವುದರಿಂದ 50 ಕೆಜಿಯ ಚೀಲದ ಒಳಗೆ ಗಮನಿಸಲಿಲ್ಲ. ಮನೆಗೆ ಬಂದು ನೋಡಿದಾಗ ಅಕ್ಕಿಯಲ್ಲಿ ದೋಷವಿರುವುದು ಕಾಣಿಸಿತು’ ಎಂದು ಪದ್ಮಾ ಅವರು ಅಳಲು ತೋಡಿಕೊಂಡರು. `ಎಲ್ಲಾ ಕಡೆ ಆಹಾರ ಇಲಾಖೆಯಿಂದ ಪೂರೈಕೆಯಾಗುವ ಅಕ್ಕಿ ಸರಿಯಾಗಿದೆ. ಇಲ್ಲಿ ಮಾತ್ರ ಸಮಸ್ಯೆ ಕಾಣಿಸಿದೆ’ ಎಂದು ಅಲ್ಲಿನವರು ಅಕ್ಕಿ ವಿತರಕರ ಮೇಲೆಯೂ ಅನುಮಾನವ್ಯಕ್ತಪಡಿಸಿದರು.
`ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಕ್ಕಿ ಜೊತೆ ಬೇರೆ ಪದಾರ್ಥವನ್ನು ಮಿಶ್ರಣ ಮಾಡಿದವರ ವಿರುದ್ಧ ಕ್ರಮವಾಗಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.